ಬೆಳಗಾವಿ: ''ಯತ್ನಾಳ್ ಅವರು ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಲು 2 ಸಾವಿರ ಕೋಟಿ, ಸಚಿವರಾಗಲು 500 ಕೋಟಿ ಹಣ ಅವರ ಹೈಕಮಾಂಡ್ಗೆ ಕೊಡಬೇಕು ಎಂದು ಹೇಳಿದ್ದರು. ಆದರೆ, ಅವರು ಎಲ್ಲಿಂದ ಈ ವಿಷಯ ಸಂಗ್ರಹಿಸುತ್ತಾರೆ. ಯಾಕೆ ಹೀಗೆ ಮಾತನಾಡುತ್ತಾರೆ ಎನ್ನುವುದೇ ವಿಚಿತ್ರ. ಇದಕ್ಕೆ ಯತ್ನಾಳ್ ಅವರೇ ಉತ್ತರಿಸುವುದು ಸೂಕ್ತ'' ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಂದು ಹೇಳಿದರು.
ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಸಲು ಕಾಂಗ್ರೆಸನವರೇ ದಾಖಲೆ ನೀಡುತ್ತಿದ್ದಾರೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಕ್ಕೆ ಬೆಳಗಾವಿಯಲ್ಲಿ ಮಾಧ್ಯಮದವರಿಗೆ ಹೀಗೆ ಪ್ರತಿಕ್ರಿಯಿಸಿದರು. ''ನಾವು ಕಾಂಗ್ರೆಸ್ನವರು, ಅವರು ಬಿಜೆಪಿಯವರು. ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಅವರು ಆಯ್ಕೆ ಮಾಡುತ್ತಾರೆ ಎಂದರೆ, ಸೂರ್ಯ ಪೂರ್ವದಿಂದ ಪಶ್ಚಿಮ ದಿಕ್ಕಿನಲ್ಲಿ ಹುಟ್ಟುತ್ತಾನೆ ಏನೋ ಎನ್ನುವ ಭಾವನೆ ಬರುತ್ತಿದೆ'' ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ನಾಯಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಡಿಕೆಶಿ ಸಿಎಂ ಮಾಡಲು ವಿಜಯೇಂದ್ರ ಮೈಸೂರು ಪಾದಯಾತ್ರೆ ಮಾಡುತ್ತಿದ್ದಾರೆ ಮತ್ತು ಡಿಕೆಶಿ ಋಣ ತೀರಿಸಲು ವಿಜಯೇಂದ್ರ ಹೊರಟಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ''ಅವರ ಕನಸಿನಲ್ಲಿ ಅಂತಹ ವಿಚಾರ ಬಂದಿರಬೇಕು. ಅವರದು ಯಾವ ಋಣ, ಏನು ಋಣ, ನನಗೂ ಗೊತ್ತಿಲ್ಲ. ನಾವಂತೂ ಕಾಂಗ್ರೆಸ್ನವರು. ಬಿಜೆಪಿ ಅವರು ನಮಗೆ ಸಹಾಯ ಮಾಡುತ್ತಾರೆ ಎಂದರೆ, ನಮಗೆ ಅದರ ಬಗ್ಗೆ ಏನೂ ಗೊತ್ತಾಗುತ್ತಿಲ್ಲ. ನಮ್ಮನ್ನು ಸಿಎಂ ಮಾಡಲು ಅವರು ಯಾರು'' ಎಂದು ಪುನರುಚ್ಚರಿಸಿದರು.
ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಸಿಎಂ, ಡಿಸಿಎಂ ಭೇಟಿ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ''ಅವರು ಭೇಟಿ ನೀಡಿಲ್ಲ ಎಂಬ ಮಾತ್ರಕ್ಕೆ ಪ್ರವಾಹದ ಬಗ್ಗೆ ಮಾಹಿತಿ ಇಲ್ಲ ಎಂದಲ್ಲ. ಆಯಾ ಜಿಲ್ಲೆಯ ಸಚಿವರಿಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಬೇಕು. ಸಂತ್ರಸ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸುವಂತೆ ಸೂಚಿಸಿದ್ದಾರೆ. 2019ರಲ್ಲಿ ಬೆಳಗಾವಿಯಲ್ಲಿ ಭೀಕರ ಪ್ರವಾಹ ಸಂಭವಿಸಿತ್ತು. ಆಗ ಪ್ರಧಾನಮಂತ್ರಿ ಇತ್ತ ತಿರುಗಿಯೂ ನೋಡಿರಲಿಲ್ಲ'' ಎಂದು ತಿರುಗೇಟು ಕೊಟ್ಟರು.
ಮುಡಾ ಪಾದಯಾತ್ರೆ ವಿಚಾರದಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ ವಿರುದ್ಧ ತಿರುಗಿಬಿದ್ದ ವಿಚಾರದ ಬಗ್ಗೆ ನನಗೇನು ಗೊತ್ತಿಲ್ಲ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ''135 ಕಾಂಗ್ರೆಸ್ ಶಾಸಕರು ಇದ್ದಾರೆ. ಸದ್ಯ ರಾಜ್ಯದಲ್ಲಿ ಸಿದ್ದರಾಮಯ್ಯ ಸಾಹೇಬ್ರು ಸಿಎಂ ಆಗಿದ್ದಾರೆ'' ಎಂದು ಹೇಳಿದರು.
ಜಿಲ್ಲಾ ವಿಭಜನೆ ವಿಚಾರವಾಗಿ ಮಾತನಾಡಿ, ''18 ಮತಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ದೊಡ್ಡ ಜಿಲ್ಲೆ ಆಗಿದ್ದರಿಂದ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆ ಆಗುತ್ತಿದೆ. ಹಾಗಾಗಿ, ಜಿಲ್ಲೆ ವಿಭಜಿಸಿ ಎರಡು ಅಥವಾ ಮೂರು ಜಿಲ್ಲೆಗಳನ್ನಾಗಿಸಬೇಕು ಎನ್ನುವ ಚರ್ಚೆಯಿದೆ. ಇದಕ್ಕೆ ನನ್ನ ಸಹಮತವೂ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಹೊಸ ಜಿಲ್ಲೆಗಳ ರಚನೆ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗುವುದು'' ಎಂದರು.
''ಬೆಳಗಾವಿ ಜಿಲ್ಲೆಯಲ್ಲಿ ಬ್ಯಾರೇಜ್ ಹಾಗೂ ಸೇತುವೆಗಳು ಎಷ್ಟು ಬಿದ್ದಿವೆ ಎಂಬ ಬಗ್ಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ನಾನೇ ಖುದ್ದಾಗಿ ಖಾನಾಪುರಕ್ಕೆ ಹೋದಾಗ ಪರಿಶೀಲನೆ ಮಾಡಿದ್ದೇನೆ. ದಾಖಲೆಗಿಂತ ವಾಸ್ತವದಲ್ಲಿ ಹೆಚ್ಚು ಮನೆಗಳು ಬಿದ್ದಿವೆ. ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡಬಾರದು'' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಸಿದರು.
ಇದನ್ನೂ ಓದಿ: ಬಿಜೆಪಿ ಪಾದಯಾತ್ರೆಯಿಂದ ಹಿಂದೆ ಸರಿದ ಜೆಡಿಎಸ್: ಪ್ರೀತಂ ಗೌಡ ವಿಷಯದಲ್ಲಿ ಹೆಚ್‌ಡಿಕೆ ಆಕ್ರೋಶ - H D Kumaraswamy