ಶಿವಮೊಗ್ಗ: ಸಾಗರ ತಾಲೂಕು ಕಲ್ಲಮನೆ ಗ್ರಾಮದ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹಣ ಹಿಂತಿರುಗಿಸುವುದಾಗಿ ಒಂದು ತಿಂಗಳ ಕಾಲಾವಕಾಶ ಕೇಳಲಾಗಿತ್ತು. ಹೀಗೆ ಕಾಲಾವಕಾಶ ಕೇಳಿ ತಿಂಗಳಾದರೂ ಯಾವುದೇ ಹಣ ವಾಪಸ್ ನೀಡದೇ ಇರುವ ಸಂಘದ ವಿರುದ್ಧ ಆಕ್ರೋಶಗೊಂಡ ಗ್ರಾಹಕರು ಸಂಘಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಕೆಲವರು ಪ್ರತಿ ದಿನ ಪಿಗ್ಮಿ ಕಟ್ಟಿದ್ದಾರೆ. ಕೆಲವರು ಕಷ್ಟಪಟ್ಟು ದುಡಿದ ಹಣವನ್ನು ಸಂಘದಲ್ಲಿ ಇಟ್ಟಿದ್ದಾರೆ. ತಮ್ಮ ಹಣ ತಮಗೆ ವಾಪಸ್ ನೀಡಬೇಕೆಂದು ಪ್ರತಿಭಟನಾ ನಿರತ ಗ್ರಾಹಕರು ಆಗ್ರಹಿಸಿದ್ದಾರೆ.
ಕಲ್ಲಮನೆ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮದ ರೈತರ ಜೀವನಾಡಿಯಾಗಬೇಕಿದ್ದ ಬ್ಯಾಂಕ್ ಈಗ ರೈತರ, ಬಡವರ ಹಣ ನುಂಗಿದ ಬ್ಯಾಂಕ್ ಆಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಹಲವು ದಿನಗಳಿಂದ ಸಂಘ ಸರಿಯಾಗಿ ಕರ್ತವ್ಯ ನಿರ್ವಹಿಸದೇ, ಗ್ರಾಹಕರಿಗೆ ಸರಿಯಾಗಿ ಸೇವೆ ನೀಡದ ಕಾರಣ ಅನುಮಾನಗೊಂಡು ಸಂಘಕ್ಕೆ ಬಂದು ವಿಚಾರಿಸಿದಾಗ ಬ್ಯಾಂಕ್ನ ಕಾರ್ಯದರ್ಶಿ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿರಲಿಲ್ಲ. ಅಲ್ಲದೇ ಸಂಘದಲ್ಲಿ ವ್ಯವಹಾರವು ಸರಿಯಾಗಿ ನಡೆಯುತ್ತಿರಲಿಲ್ಲ.
ಇದರಿಂದ ಗ್ರಾಹಕರು ತಮ್ಮ ಹಣ ವಾಪಸ್ ನೀಡುವಂತೆ ಸಂಘದ ಅಧ್ಯಕ್ಷರನ್ನು ಕೇಳಿದಾಗ ಹಣದ ಕೀಲಿ ಕೈ ಕಾರ್ಯದರ್ಶಿ ಮೇಘರಾಜ್ ಅವರ ಬಳಿ ಇದೆ. ಅವರು ಸಂಘಕ್ಕೆ ಬಂದ ಮೇಲೆ ಹಣ ವಾಪಸ್ ನೀಡುವುದಾಗಿ ಹೇಳುತ್ತಿದ್ದರು. ಇದರಿಂದ ಕೆರಳಿದ ಗ್ರಾಹಕರು ಕಳೆದ ತಿಂಗಳು ಸಂಘಕ್ಕೆ ಬಂದು ಗಲಾಟೆ ಮಾಡಿದ್ದರು. ಆಗ ಗ್ರಾಮದ ಹಿರಿಯರು ಹಾಗೂ ಕೆಲ ಮುಖಂಡರು ಬಂದು ವಿಚಾರಿಸಿದಾಗ ಸಂಘದವರು ಒಂದು ತಿಂಗಳ ಕಾಲಾವಧಿಯನ್ನು ಕೇಳಿದ್ದರು ಎಂದು ಗ್ರಾಹಕರು ತಿಳಿಸಿದ್ದಾರೆ.
ಈ ಸಂಘದಿಂದಲೇ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಡಿಸಿಸಿ ಬ್ಯಾಂಕ್ಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸದ್ಯಕ್ಕೆ ಕಲ್ಲಮನೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಿಗ್ಮಿಹಣ ಹಾಗೂ ವ್ಯವಹಾರ ಹಣ ಸೇರಿ ಸುಮಾರು 5 ಕೋಟಿ ರೂ. ನಷ್ಟು ದುರುಪಯೋಗವಾಗಿದೆ ಎಂದು ಅಂದಾಜಿಸಲಾಗಿದೆ.
ಈ ಕುರಿತು ಮಾತನಾಡಿರುವ ಕಲ್ಲಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, "ಕಲ್ಲಮನೆ ಸಂಘಕ್ಕೆ ಬಂದು ಕಳೆದ ತಿಂಗಳು ಪಿಗ್ಮಿ ಕಟ್ಟಿದವರು ಹಾಗೂ ಎಫ್ಡಿ ಇಟ್ಟಿದ್ದವರು ಹಣ ವಾಪಸ್ ಕೇಳಿದಾಗ ಅರ್ಧ ಹಣ ವಾಪಸ್ ನೀಡಲು ಒಂದು ತಿಂಗಳು ಕಾಲಾವಧಿಯನ್ನು ಕೇಳಿದ್ದರು. ಆದರೆ, ಒಂದು ತಿಂಗಳಾದರೂ ಯಾವುದೇ ಹಣವನ್ನು ಸಂಘ ವಾಪಸ್ ನೀಡಿಲ್ಲ." ಎಂದು ತಿಳಿಸಿದರು.
ಕಲ್ಲಮನೆ ಸಹಕಾರ ಸಂಘದ ಅವ್ಯವಹಾರ ಕುರಿತು ಸಾಗರ ಎ.ಸಿ. ಯತೀಶ್ ಅವರ ನೇತೃತ್ವದಲ್ಲಿ ಜಿಲ್ಲಾ ಸಹಕಾರ ಇಲಾಖೆಯ ಡಿಆರ್ ಹಾಗೂ ಎಆರ್ ಅವರು ಕಲ್ಲಮನೆ ಸಹಕಾರ ಸಂಘದ ಅಧ್ಯಕ್ಷರು, ನಿರ್ದೆಶಕರ ಜೊತೆ ಸಭೆ ನಡೆಸಿದ್ದಾರೆ.
ಈ ಕುರಿತು ಈ ಟಿವಿ ಭಾರತ್ ಜೊತೆ ಮಾತನಾಡಿದ ಜಿಲ್ಲಾ ಸಹಕಾರ ಸಂಘದ ಸಹಾಯಕ ನಿಬಂಧಕ ನಾಗಭೂಷಣ್ ಕಲ್ಮನಿ, "ಕಲ್ಲಮನಿ ಸಂಘದಲ್ಲಿ ಅವ್ಯವಹಾರ ನಡೆದಿದೆಯೋ, ಸಂಘದ ಹಣ ಏನಾಗಿದೆ ಎಂಬುದು ಇನ್ನೂ ತಿಳಿದಿಲ್ಲ. ಎಷ್ಟು ಎಂದು ಲೆಕ್ಕ ತಿಳಿದ ಮೇಲೆಯೇ ಹೇಳಬಹುದು. ಸದ್ಯದ ಮಟ್ಟಿಗೆ ಸಹಕಾರ ಬ್ಯಾಂಕ್ನ ಕಾರ್ಯದರ್ಶಿ ಮೇಘರಾಜ್ ನಾಪತ್ತೆಯಾಗಿದ್ದಾರೆ. ಅವರ ವಿರುದ್ಧ ಸಂಘದ ನಿರ್ದೇಶಕ ನಾಗರಾಜ್ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ, ಅವರು ಬಂದ ಮೇಲೆಯೇ ಹಣದ ಕುರಿತು ಮಾಹಿತಿ ಲಭ್ಯವಾಗಲಿದೆ. ಸದ್ಯದ ಮಟ್ಟಿಗೆ ಸಂಘಕ್ಕೆ ಇನ್ನೋರ್ವರನ್ನು ನೇಮಕ ಮಾಡಲಾಗಿದೆ. ತನಿಖೆ ಮುಗಿದ ಮೇಲೆಯೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಸದ್ಯಕ್ಕೆ ಗ್ರಾಹಕರ ಮನವೊಲಿಸಲಾಗಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ವಜಾಗೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ - Appeal To The Governor