ಬೆಂಗಳೂರು: 10 ಹೆಚ್.ಪಿ. ವರೆಗಿನ ನೀರಾವರಿ ಪಂಪ್‌ಸೆಟ್ ಸ್ಥಾವರಗಳ ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಸೆ. 23ರ ಒಳಗಾಗಿ ಪೂರ್ಣಗೊಳಿಸಿ ವರದಿ ನೀಡಲು ಇಂಧನ ಇಲಾಖೆ ಎಸ್ಕಾಂಗಳಿಗೆ ಸೂಚನೆ ನೀಡಿದೆ.
ಅಕ್ಟೋಬರ್ ತಿಂಗಳ 10 ಹೆಚ್.ಪಿ ವರೆಗಿನ ನೀರಾವರಿ ಪಂಪ್‌ಸೆಟ್‌ಗಳ ಸಹಾಯಧನ ಬಿಡುಗಡೆಯನ್ನು ವ್ಯವಸ್ಥಿತ ರೂಪದಲ್ಲಿ ಪಡೆಯಲು ಆಧಾರ್ ಜೋಡಣೆ ಪ್ರಕ್ರಿಯೆಯನ್ನು 23-09-2024ರೊಳಗಾಗಿ ಪೂರ್ಣಗೊಳಿಸಿ, ವರದಿಯನ್ನು ಸೆ.24 ರೊಳಗಾಗಿ ಸರ್ಕಾರಕ್ಕೆ ನೀಡಲು ಹಾಗೂ ಆಧಾರ್ ಪ್ರಕ್ರಿಯೆ ಪೂರ್ಣಗೊಳ್ಳದಿದ್ದಲ್ಲಿ ಉಂಟಾಗುವ ಸಹಾಯಧನದ ಬಿಡುಗಡೆಯ ವ್ಯತಿರಿಕ್ತ ಪರಿಣಾಮಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳು ನೇರ ಹೊಣೆಯಾಗಲಿವೆ ಎಂದು ಇಂಧನ ಇಲಾಖೆಯಿಂದ ಎಲ್ಲಾ ಎಸ್ಕಾಂಗಳಿಗೆ ಎಚ್ಚರಿಕೆ ನೀಡಲಾಗಿದೆ.
ಆರ್ಥಿಕ ಇಲಾಖೆ ಆಧಾರ್ ಜೋಡಣೆ ಪ್ರಕ್ರಿಯೆ ಸಂಪೂರ್ಣವಾಗಿ ಸಾಧಿಸದಿರುವುದರಿಂದ ಹಾಗೂ ಈಗಾಗಲೇ ಆಧಾರ್ ಜೋಡಣೆಯಾಗಿರುವ ನೀರಾವರಿ ಪಂಪ್‌ಸೆಟ್ ಸ್ಥಾವರಗಳ ಸಹಾಯಧನವನ್ನು ಪರಿಣಾಮಕಾರಿ ಮತ್ತು ಫಲಪ್ರದ ವಿತರಣೆಗಾಗಿ ಮಾಲೀಕತ್ವ, ಭೂಮಿಯ ವಿಸ್ತೀರ್ಣ ಮತ್ತು ಇತರೆ ಅಂಶಗಳ ಬಗ್ಗೆ ವರದಿಯನ್ನು ನೀಡದಿರುವುದರಿಂದ ಸೆಪ್ಟೆಂಬರ್-24ರ ಮಾಹೆಯ ಅನುದಾನವನ್ನು ಬಿಡುಗಡೆಗೊಳಿಸಿಲ್ಲ.
ಆಧಾರ್ ಜೋಡಣೆಯ ನೋಡಲ್ ಕಂಪನಿಯಾದ ಬೆಸ್ಕಾಂ 1,92,861ರಷ್ಟು 10 ಹೆಚ್.ಪಿ ವರೆಗಿನ ನೀರಾವರಿ ಪಂಪ್‌ಸೆಟ್‌ಗಳ ಸ್ಥಾವರಗಳ ಆಧಾರ್ ಜೋಡಣೆ ಪ್ರಕ್ರಿಯೆ ಬಾಕಿಯು ಮಾಲೀಕನ ನಿಧನ, ಮಾಲೀಕತ್ವದ ಬದಲಾವಣೆ ಇತರೆ ಕೌಟುಂಬಿಕ ಕಾರಣಗಳು, FRUITS ಮತ್ತು DATA BASE ನಲ್ಲಿ ಜೋಡಣೆಗೊಳಿಸಲು ಮೊಬೈಲ್ ಸಂಖ್ಯೆಗಳು ದಾಖಲಾಗದಿರುವುದು, ಅಮಾನ್ಯವಾಗಿರುವ ಆಧಾರ್ ಕಾರ್ಡ್‌ಗಳನ್ನು ಸಂಬಂಧಿಸಿದ ಮಾಲೀಕರಿಂದ ಮರುಪಡೆಯುವಿಕೆ ಮತ್ತು ಶಾಶ್ವತ ನಿಲುಗಡೆ ಹೊಂದಿದ ಸ್ಥಾವರಗಳ ಕಂದಾಯ ಖಾತೆಗಳನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆ ಚಾಲ್ತಿಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ 1 ಅಥವಾ 2 ತಿಂಗಳ ಸಮಯಾವಕಾಶ ಅಗತ್ಯವಿರುವುದಾಗಿ ಕೋರಿತ್ತು.
ವಿದ್ಯುತ್ ಸರಬರಾಜು ಕಂಪನಿಗಳು ಆರ್ಥಿಕ ನಷ್ಟವನ್ನು ಅನುಭವಿಸುತ್ತಿರುವುದರಿಂದ ವಿದ್ಯುತ್ ಖರೀದಿ, ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲಗಳ ಮರುಪಾವತಿ ಮತ್ತು ಇತರೆ ವೆಚ್ಚಗಳನ್ನು ವ್ಯಯಿಸಲು ಸರ್ಕಾರದಿಂದ ಬಿಡುಗಡೆಯಾಗುವ ಸಹಾಯಧನವನ್ನು ಅವಲಂಬಿಸಿದೆ. ಹೀಗಾಗಿ ಸೆಪ್ಟೆಂಬರ್ ತಿಂಗಳ ಸಹಾಯಧನವನ್ನು ಬಿಡುಗಡೆಗೊಳಿಸಲು ಮತ್ತೊಮ್ಮೆ ಆರ್ಥಿಕ ಇಲಾಖೆಯನ್ನು ಕೋರಲಾಗಿದೆ. ಆರ್ಥಿಕ ಇಲಾಖೆ ಸೆಪ್ಟೆಂಬರ್ ತಿಂಗಳ ಸಹಾಯಧನವನ್ನು ಬಿಡುಗಡೆಗೊಳಿಸಲು ಸಮ್ಮತಿಸಿದೆ. ಇನ್ನು, ಅಕ್ಟೋಬರ್ ತಿಂಗಳ ಸಹಾಯಧನ ಬೇಡಿಕೆಯನ್ನು ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕೋರಲು ಸೂಚಿಸಿದೆ. ಈ ಹಿನ್ನೆಲೆ ಸೆ.23ರೊಳಗೆ ಕೃಷಿ ಪಂಪ್ ಸೆಟ್ಗಳ ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಈವರೆಗಿನ ಆಧಾರ್ ಜೋಡಣೆ ಸ್ಥಿತಿಗತಿ: ಈವರೆಗೆ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಸುಮಾರು 33,83,064 ಸಕ್ರಿಯ ಕೃಷಿ ಪಂಪ್ಸೆಟ್ಗಳಿವೆ. ಸೆ. 17ರ ವರೆಗೆ ಒಟ್ಟು 31,90,203 ಪಂಪ್ ಸೆಟ್ಗಳಿಗೆ ಆಧಾರ್ ಜೋಡಣೆಯಾಗಿದೆ. ಅಂದರೆ 94.30% ಆಧಾರ್ ಜೋಡಣೆಯಾಗಿರುವುದಾಗಿ ವರದಿ ನೀಡಿದೆ. ಇನ್ನೂ 1,92,861 ಪಂಪ್ ಸೆಟ್ಗಳಿಗೆ ಆಧಾರ್ ಲಿಂಕ್ ಬಾಕಿ ಉಳಿದುಕೊಂಡಿದೆ. ಅಂದರೆ ಸುಮಾರು 5.70% ಪಂಪ್ ಸೆಟ್ಗಳ ಆಧಾರ್ ಲಿಂಕ್ ಬಾಕಿ ಉಳಿದಿರುವುದಾಗಿ ಇಲಾಖೆ ಮಾಹಿತಿ ನೀಡಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ 9,23,678 ಆಧಾರ್ ಲಿಂಕ್ ಆಗಿದ್ದು, 63,323 ಬಾಕಿ ಉಳಿದುಕೊಂಡಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ 4,44,776 ಪಂಪ್ ಸೆಟ್ಗಳಿಗೆ ಆಧಾರ್ ಲಿಂಕ್ ಆಗಿದ್ದು, 34,363 ಪಂಪ್ ಸೆಟ್ ಆಧಾರ್ ಲಿಂಕ್ ಬಾಕಿ ಉಳಿದುಕೊಂಡಿದೆ. ಹೆಸ್ಕಾಂ ವ್ಯಾಪ್ತಿಯಲ್ಲಿ 4,31,024 ಪಂಪ್ ಸೆಟ್ ಆಧಾರ್ ಲಿಂಕ್ ಆಗಿದ್ದು, 10,516 ಬಾಕಿ ಉಳಿದುಕೊಂಡಿದೆ.
ಗುಲ್ಬರ್ಗಾ ಎಸ್ಕಾಂ ವ್ಯಾಪ್ತಿಯಲ್ಲಿ 9,57,897 ಪಂಪ್ ಸೆಟ್ಗಳು ಆಧಾರ್ ಕಾರ್ಡ್ ಲಿಂಕ್ ಆಗಿದ್ದು, ಸುಮಾರು 67,037 ಪಂಪ್ ಸೆಟ್ಗಳು ಆಧಾರ್ ಲಿಂಕ್ ಬಾಕಿ ಉಳಿದಿವೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಸಂಸ್ಥೆ ವ್ಯಾಪ್ತಿಯಲ್ಲಿ 24,985 ಪಂಪ್ ಸೆಟ್ಗಳು ಆಧಾರ್ ಲಿಂಕ್ ಆಗಿದ್ದು, 9,118 ಬಾಕಿ ಉಳಿದಿದೆ. ಹುಕ್ಕೇರಿ ವಿದ್ಯುತ್ ಸರಬರಾಜು ಕಂ. ವ್ಯಾಪ್ತಿಯಲ್ಲಿ 4,07,843 ಪಂಪ್ ಸೆಟ್ಗಳ ಆಧಾರ್ ಲಿಂಕ್ ಆಗಿದ್ದು, 8,504 ಆಧಾರ್ ಲಿಂಕ್ ಬಾಕಿ ಉಳಿದಿವೆ.
ಇದನ್ನೂ ಓದಿ: ಹೈಕೋರ್ಟ್ ಆದೇಶ ಪಾಲಿಸಿದ ಬೆಳಗಾವಿ ಮಹಾನಗರ ಪಾಲಿಕೆ: ರಸ್ತೆಯ ಒಂದು ಭಾಗ ಭೂಮಾಲೀಕರಿಗೆ ಹಸ್ತಾಂತರ - land Handover