ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಗೆ ಪ್ರತಿನಿತ್ಯ ಮತ್ತೊಂದು ವಿಮಾನ ಸಂಚಾರ ಆರಂಭವಾಗಿದೆ. ವಿಮಾನಯಾನ ಸಂಸ್ಥೆ ಇಂಡಿಗೋ ಪ್ರತಿದಿನ ಮಂಗಳೂರಿನಿಂದ ಅಬುಧಾಬಿಗೆ ಸಂಚಾರ ಶುಕ್ರವಾರದಿಂದ ಶುರುವಾಗಿದೆ.
ಆಗಸ್ಟ್ 9 ರಂದು ಅಬುಧಾಬಿಗೆ ಇಂಡಿಗೋ ನಿತ್ಯ ವಿಮಾನ ಪ್ರಯಾಣ ಆರಂಭವಾಗಿದೆ. ಈ ಉದ್ಘಾಟನಾ ವಿಮಾನದಲ್ಲಿ ತನ್ನ ತಾಯಿಯೊಂದಿಗೆ ಚೆಕ್-ಇನ್ ಮಾಡಿದ ಮೊದಲ ಪ್ರಯಾಣಿಕರಾದ ನಂದಿಕಾ ವಿ ಎಲ್ಲರ ಗಮನ ಸೆಳೆದರು. ವಿಮಾನ ನಿಲ್ದಾಣದಲ್ಲಿ ವಿಮಾನ ಆರಂಭ ಕಾರ್ಯಕ್ರಮದ ಸಾಂಪ್ರದಾಯಿಕ ದೀಪವನ್ನು ಬೆಳಗಿಸುವ ಅವಕಾಶವನ್ನು ನಂದಿಕಾ ಪಡೆದರು. ಜೊತೆಗೆ ವಿಮಾನಯಾನ ಸಿಬ್ಬಂದಿ ಜೊತೆ ಸಾಂಪ್ರದಾಯಿಕವಾಗಿ ಕೇಕ್ ಕತ್ತರಿಸಿದರು.
ಅಬುಧಾಬಿಗೆ ನಿತ್ಯ ಎರಡು ವಿಮಾನ: ಈ ಮೊದಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ಅಬುಧಾಬಿಗೆ ನಿತ್ಯ ಒಂದು ವಿಮಾನ ಸೇವೆ ಒದಗಿಸುತ್ತಿದೆ. ಇದೀಗ ಇಂಡಿಗೋ ವಿಮಾನ ಕೂಡ ಸಂಚಾರ ಆರಂಭಿಸಿದೆ. ಈ ಮೂಲಕ ಅಬುಧಾಬಿಗೆ ಇಲ್ಲಿಂದ ನಿತ್ಯ ರಡು ವಿಮಾನಗಳು ಸಂಚರಿಸಲಿವೆ.
'ಈ ಹೊಸ ವಿಮಾನದ ಪ್ರಾರಂಭವು ವಿಮಾನಯಾನ ಮತ್ತು ವಿಮಾನ ನಿಲ್ದಾಣ ಆಪರೇಟರ್ ನಡುವಿನ ನಿಕಟ ಕೆಲಸದ ಸಂಬಂಧಕ್ಕೆ ಸಾಕ್ಷಿಯಾಗಿದೆ. ಇದು ಈ ಪ್ರದೇಶದ ಜನರಿಗೆ ಜಗತ್ತಿಗೆ ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ' ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಂಡಿಗೋದ ಅಬುಧಾಬಿ-ಮಂಗಳೂರು ಮೊದಲ ವಿಮಾನಕ್ಕೆ ಸಾಂಪ್ರದಾಯಿಕ ವಾಟರ್ ಕ್ಯಾನನ್ ವಂದನೆ ಸಲ್ಲಿಸಿತು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಸ್ತುತ ಎಂಟು ಮಧ್ಯಪ್ರಾಚ್ಯ ಸ್ಥಳಗಳಿಗೆ ಮತ್ತು ಆರು ದೇಶೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ.