ಶಹದೋಲ್(ಮಧ್ಯಪ್ರದೇಶ): ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ತಡೆಯಲು ಹೋದ ಪೊಲೀಸ್ ಅಧಿಕಾರಿ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆಗೈದಿರುವ ಘಟನೆ ಇಲ್ಲಿಯ ಬಾಡೋಲಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಬಿಯೊಹರಿ ಪೊಲೀಸ್ ಠಾಣೆಯಲ್ಲಿ ನಿಯೋಜಿತವಾಗಿದ್ದ ಎಎಸ್‌ಐ ಮಹೇಂದ್ರ ಬಾಗ್ರಿ ಅವರು ಅಕ್ರಮ ಮರಳು ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದು ಇಬ್ಬರು ಕಾನ್ಸ್ಟೇಬಲ್ಗಳೊಂದಿಗೆ ಪರಿಶೀಲನೆಗಾಗಿ ರಾತ್ರಿ 1 ಗಂಟೆಗೆ ಬಾಡೋಲಿ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಟ್ರ್ಯಾಕ್ಟರ್ವೊಂದರಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತಿತ್ತು. ಇದನ್ನು ಕಂಡ ಮಹೇಂದ್ರ ಟ್ರ್ಯಾಕ್ಟರ್ ತಡೆಯಲು ಮುಂದಾಗಿದ್ದಾರೆ. ಆದರೆ ಚಾಲಕ ಟ್ರ್ಯಾಕ್ಟರ್ ನಿಲ್ಲಿಸದೇ ಅವರ ಮೇಲೆಯೇ ಹತ್ತಿಸಿದ್ದಾನೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಎಎಸ್‌ಐ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಧಿಕಾರಿಯ ಜತೆಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಟ್ರ್ಯಾಕ್ಟರ್ ಚಾಲಕ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಶಾಹದೋಲ್ ವಲಯ ಎಡಿಜಿಪಿ ಡಿಸಿ ಸಾಗರ್ ಮಾಹಿತಿ ನೀಡಿದ್ದು, "ಈ ಘಟನೆ ಅತ್ಯಂತ ಹೃದಯವಿದ್ರಾವಕವಾಗಿದೆ. ಟ್ರ್ಯಾಕ್ಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ. ಟ್ರ್ಯಾಕ್ಟರ್ ಮಾಲಕ ತಲೆಮರೆಸಿಕೊಂಡಿದ್ದು, ಆತನ ಸುಳಿವು ನೀಡಿದವರಿಗೆ 30 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿದೆ" ಎಂದು ಹೇಳಿದರು.