ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದಕ್ಕೂ ಮುನ್ನ ಮೂರುಸಾವಿರ ಮಠದಿಂದ ಶ್ರೀರಾಮನ ಅವತಾರದ ಗಣೇಶಮೂರ್ತಿಯನ್ನು ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನಕ್ಕೆ ಭವ್ಯ ಮೆರವಣಿಗೆ ಮೂಲಕ ತರಲಾಯಿತು. ಈ ವೇಳೆ ಡಿಜೆ, ವಿವಿಧ ವಾದ್ಯಮೇಳಗಳಿಗೆ ಜನರು ಕುಣಿದು ಕುಪ್ಪಳಿಸಿದರು. ಜಾಂಜ್ ಮೇಳ ಎಲ್ಲರ ಗಮನಸೆಳೆಯಿತು.
ಇಂದಿನಿಂದ ಮೂರು ದಿನಗಳ ಕಾಲ ಗಣೇಶಮೂರ್ತಿಗೆ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಕಾರ್ಯಕ್ರಮಗಳು ನಡೆಯಲಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈದಾನದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಈದ್ಗಾ ಮೈದಾನ ಸೇರಿ 1000 ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ: ಹು - ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪ್ರತಿಕ್ರಿಯಿಸಿ, ಹುಬ್ಬಳ್ಳಿ - ಧಾರವಾಡ ಅವಳಿನಗರದಲ್ಲಿ ಸುಮಾರು 1 ಸಾವಿರ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿಮೂರ್ತಿ ಪ್ರತಿಷ್ಠಾಪನೆ ಆಗಿವೆ. ಈಗಾಗಲೇ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಹಿತಕರ ಘಟನೆ ನಡೆಯದಂತೆ ರೌಡಿಶೀಟರ್ ಪರೇಡ್ ಸೇರಿ ಪಬ್ಲಿಕ್ ಮೀಟಿಂಗ್ ಮಾಡಲಾಗಿದೆ. ಸರ್ವ ಧರ್ಮದ ಮುಖಂಡರ ಜತೆಗೆ ಸಭೆ ಮಾಡಿ ತಿಳಿವಳಿಕೆ ಹೇಳಲಾಗಿದೆ. ಅವಳಿ ನಗರದಲ್ಲಿ ಶಾಂತಿಯುತ ಗಣೇಶ ಹಬ್ಬಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಕುರಿತು ಪ್ರತಿಕ್ರಿಯಿಸಿ, ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ಈಗಾಗಲೇ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮಹಾನಗರ ಪಾಲಿಕೆ ಸೇರಿ ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಆವರಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾ ಮಂಡಳಿ ನೇತೃತ್ವದಲ್ಲಿ ಮೂರ್ತಿ ಪ್ರತಿಷ್ಠಾಪನೆಯಾಗಿದೆ ಎಂದರು.
ಹುಬ್ಬಳ್ಳಿಯಲ್ಲಿ ಗಣೇಶ ಹಬ್ಬದ ಸಂಭ್ರಮ ನೋಡಲು ಬೇರೆ ಬೇರೆ ಕಡೆಯಿಂದ ಜನ ಇಲ್ಲಿಗೆ ಬರ್ತಾರೆ. ಅಂತಹವರು ಕಾನೂನು ಉಲ್ಲಂಘನೆ ಮಾಡಬಾರದು. ನಶೆಯಲ್ಲಿ ಬಂದು ಗಲಾಟೆ ಮಾಡುವವರ ಮೇಲೆ ಕಣ್ಣಿಡಲು ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ. ಮೆರವಣಿಗೆ, ಮೂರ್ತಿ ವಿಸರ್ಜನೆ ವೇಳೆ ಕಾನೂನು ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅವಳಿನಗರದಲ್ಲಿ ಗಣೇಶಮೂರ್ತಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಎಚ್ಚರಿಕೆಯಿಂದ ಅರ್ಥ ಪೂರ್ಣವಾಗಿ ಎಲ್ಲರೂ ಹಬ್ಬ ಆಚರಣೆ ಮಾಡಲು ಕರೆ ನೀಡಿದರು.