ಬೇಕರಿ ಐಟಂ ಬಾಕ್ಸ್‌ಗಳಲ್ಲಿ ವಿದೇಶದಿಂದ ಬೆಂಗಳೂರಿಗೆ ಡ್ರಗ್ಸ್: ಓರ್ವ ಸೆರೆ, ₹1.22 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ - Hydroganja - HYDROGANJA
ಪ್ಲಾಸ್ಟಿಕ್ ಕವರ್‌ನಲ್ಲಿ ಹೈಡ್ರಾ ಗಾಂಜಾ ಪ್ಯಾಕ್ ಮಾಡಿ ಬೇಕರಿ ಐಟಂ ಬಾಕ್ಸ್‌ಗಳಲ್ಲಿ ತುಂಬಿಸಿ ಬಿಸ್ಕೆಟ್, ಚಾಕಲೇಟ್ ಎಂದು ಬಿಂಬಿಸಿ ಥೈಲ್ಯಾಂಡ್‌ನಿಂದ ಬೆಂಗಳೂರಿಗೆ ತರಿಸಿ ಮಾರುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Published : Sep 10, 2024, 1:19 PM IST
ಬೆಂಗಳೂರು: ಥೈಲ್ಯಾಂಡ್‌ನಿಂದ ಮಾದಕ ಪದಾರ್ಥಗಳನ್ನು ಬೆಂಗಳೂರಿಗೆ ಆಮದು ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳು ಮತ್ತು ಪರಿಚಿತರಿಗೆ ಪೂರೈಸುತ್ತಿದ್ದ ಆರೋಪಿಯನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತವನೀಶ್ ಬಂಧಿತ. ಈತನಿಂದ 1.22 ಕೋಟಿ ರೂ ಮೌಲ್ಯದ 2 ಕೆ.ಜಿ 770 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.
ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಆರೋಪಿಯು ಡಿ.ಜೆ ಪಾರ್ಟಿಗಳಲ್ಲಿ ಭಾಗಿಯಾಗಲು ಹಿಮಾಚಲ ಪ್ರದೇಶಕ್ಕೆ ತೆರಳುತ್ತಿದ್ದ. ಅದೇ ಸಮಯದಲ್ಲಿ ಆರೋಪಿಗೆ ಕೇರಳ ಮೂಲದ ಸೈಜು ಎಂಬಾತನ ಪರಿಚಯವಾಗಿತ್ತು. ಸೈಜುನ ಮೂಲಕ ಥೈಲ್ಯಾಂಡ್‌ನಿಂದ ಹೈಡ್ರೋ ಗಾಂಜಾವನ್ನು ಆಮದು ಮಾಡಿಕೊಳ್ಳುತ್ತಿದ್ದ. ಗಾಂಜಾವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿ, ಬೇಕರಿ ಐಟಂ ಬಾಕ್ಸ್‌ಗಳಲ್ಲಿ ತುಂಬಿ, ಅವುಗಳನ್ನು ಬಿಸ್ಕೆಟ್, ಚಾಕಲೇಟ್ ಎಂದು ಬಿಂಬಿಸಿ ಸೈಜು ಮೂಲಕ ಬೆಂಗಳೂರಿಗೆ ಆಮದು ಮಾಡಿಕೊಳ್ಳುತ್ತಿದ್ದ. ಬಳಿಕ ಅವುಗಳನ್ನು ಕಾಲೇಜು ವಿದ್ಯಾರ್ಥಿಗಳು ಮತ್ತು ಪರಿಚಿತರಿಗೆ ಬಂಧಿತ ಆರೋಪಿ ಮಾರಾಟ ಮಾಡುತ್ತಿದ್ದ.
ಸೆಪ್ಟೆಂಬರ್ 4ರಂದು ಆಂಧ್ರಹಳ್ಳಿಯ ಕಾಲೇಜ್‌ವೊಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆರೋಪಿಯ ಸ್ನೇಹಿತನಾದ ಕೇರಳ ಮೂಲದ ವ್ಯಕ್ತಿಯು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉಳ್ಳಾಲ ಕಾನ್‌ಸ್ಟೇಬಲ್ ಕೊಲೆ ಯತ್ನ ಕೇಸ್: ಇಬ್ಬರಿಗೆ ದಂಡ ಸಹಿತ ಜೈಲು ಶಿಕ್ಷೆ - Ullal Attempt To Murder Case