ದಾವಣಗೆರೆ: ಶೀಲ ಶಂಕೆ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ. ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ ಪತಿ, ಬಳಿಕ ತಾನೂ ಕೂಡ ಅತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ.
ಗೌರಿಪುರ ಗ್ರಾಮದ ನಾಗಮ್ಮ (51) ಪತಿಯಿಂದ ಕೊಲೆಯಾಗಿದ್ದು, ಆರೋಪಿ ಸತ್ಯಪ್ಪ (55) ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಾಗಮ್ಮ ಸಂತೆಮುದ್ದಾಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಅನುಮಾನದ ಮೇಲೆ ಕೊಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಮೃತ ನಾಗಮ್ಮ ಮಂಗಳವಾರ ರಾತ್ರಿ ಮಲಗಿದ್ದ ವೇಳೆ ಪತಿ ಸತ್ಯಪ್ಪ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ನಂತರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥನಾಗಿದ್ದ ಸತ್ಯಪ್ಪನನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಗಳೂರು ಪಿಐ ಶ್ರೀನಿವಾಸ್ ಹೇಳಿದ್ದೇನು?: ಜಗಳೂರು ಪೊಲೀಸ್ ಠಾಣೆ ಪಿಐ ಶ್ರೀನಿವಾಸ್ 'ಈಟಿವಿ ಭಾರತ' ಜೊತೆ ಮಾತನಾಡಿ, "ಶೀಲ ಶಂಕೆಯಿಂದ ಪತಿ ಸತ್ಯಪ್ಪ (55), ತನ್ನ ಪತ್ನಿ ನಾಗಮ್ಮ(50) ರನ್ನು ಮನೆಯಲ್ಲಿ ಕೊಲೆ ಮಾಡಿದ್ದಾನೆ. ಶಿಕ್ಷಕಿ ಆಗಿದ್ದ ನಾಗಮ್ಮಳನ್ನು ಹೊಂಚು ಹಾಕಿ, ರಾತ್ರಿ ವೇಳೆ ಕೊಲೆ ಮಾಡಿದ್ದಾನೆ. ಬಳಿಕ ಪತಿ ಸತ್ಯಪ್ಪ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ'' ಎಂದು ತಿಳಿಸಿದ್ದಾರೆ.
ಎಸ್ಪಿ ಪ್ರತಿಕ್ರಿಯೆ: ಘಟನಾ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಎಸ್ಪಿ, ''ಮೃತ ನಾಗಮ್ಮಳ ಸಹೋದರಿ ನೀಡಿದ ದೂರಿನಂತೆ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಪತಿ ಸತ್ಯಪ್ಪ (55), ತನ್ನ ಪತ್ನಿ ನಾಗಮ್ಮನ(51) ಶೀಲದ ಬಗ್ಗೆ ಅನುಮಾನ ಹೊಂದಿದ್ದ. ಈ ಸಂಬಂಧ ದಂಪತಿ ಪದೇ ಪದೆ ಜಗಳ ನಡೆಯುತ್ತಿತ್ತು. ಅಲ್ಲದೆ, ತನ್ನ ತಾಯಿಗೆ ಈ ವಿಚಾರ ತಿಳಿಸಿದ್ದ ನಾಗಮ್ಮ, ಇತ್ತೀಚೆಗೆ ಕೆಲಸವನ್ನೂ ಬಿಟ್ಟಿದ್ದರು. ಈ ನಡುವೆ ರಾತ್ರಿ ವೇಳೆ ಕೊಲೆ ಮಾಡಿದ್ದಾನೆ ಎಂದು ಗೊತ್ತಾಗಿದೆ. ಚಾಕುವಿನಿಂದ ಕತ್ತು ಕೊಯ್ದ ಬಳಿಕ ಪತಿಯೂ ಆತ್ಮಹತ್ಯೆಗೆ ಯತ್ನಿಸಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಆತ ಯಾವುದೇ ಹೇಳಿಕೆ ಕೊಡುವ ಪರಿಸ್ಥಿತಿಯಲ್ಲೂ ಇಲ್ಲ. ದಂಪತಿಗೆ ಮಕ್ಕಳಿರಲಿಲ್ಲ ಎಂದು ತಿಳಿದುಬಂದಿದೆ. ತನಿಖೆ ಮುಂದುವರೆದಿದೆ, ಆರೋಪಿಯು ಮಾತನಾಡುವಷ್ಟು ಚೇತರಿಸಿಕೊಂಡ ಬಳಿಕವೇ ನಿಖರ ಮಾಹಿತಿ ಸಿಗಲಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಭೂಗತ ಲೋಕದ ಸದ್ದು! ಹಫ್ತಾ ವಸೂಲಿಗೆ ಯತ್ನ, ಕಲಿ ಯೋಗೀಶನ ಸಹಚರರ ಸೆರೆ - Extortion Case