ಗಂಗಾವತಿ: ಗಣೇಶ ಚತುರ್ಥಿ ಭಾಗವಾಗಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಸುಮಾರು ಎರಡು ಸಾವಿರ ಮಕ್ಕಳು ಸಾಮೂಹಿಕವಾಗಿ ಸೇರಿ ಬೃಹತ್ ವಿನಾಯಕನ ಆಕೃತಿ ರಚನೆಯಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಮೂರು ಎಕರೆಯಷ್ಟಿರುವ ಶಾಲಾ ಮೈದಾನದಲ್ಲಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಶಾಲೆಯ ಕಲಾ ಶಿಕ್ಷಕ ವಿನೋದ್ ರಚಿಸಿದ್ದ ಸ್ಕೆಚ್ನಲ್ಲಿ ಮಕ್ಕಳು ಸಾಮೂಹಿಕವಾಗಿ ನಿಂತು ವಿಘ್ನ ನಿವಾರಕ ವಿನಾಯಕನ ಆಕೃತಿ ರಚನೆಯಲ್ಲಿ ಭಾಗಿಯಾಗಿದ್ದರು. ಈ ದೃಶ್ಯವನ್ನು ಸುಮಾರು ಐನ್ನೂರು ಅಡಿಗಳ ಎತ್ತರದಿಂದ ಡ್ರೋನ್ ಮೂಲಕ ಸೆರೆ ಹಿಡಿಯಲಾಯಿತು.
ಬೃಹತ್ ಆಕಾರದ ಗಣೇಶನ ಆಕೃತಿಯ ಕೆಳಗೆ ಶಿಕ್ಷಣ ಸಂಸ್ಥೆಯ 25ಕ್ಕೂ ಹೆಚ್ಚು ವಾಹನಗಳನ್ನು ಬಳಸಿಕೊಂಡು ಶ್ರೀ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಎಂಬ ಶಾಲೆಯ ಸಂಕೇತಾಕ್ಷರಗಳು ಬರುವಂತೆ ನಿಲ್ಲಿಸಲಾಗಿತ್ತು. ಶಾಲಾ ಮಕ್ಕಳ ಈ ಸಾಹಸ ಸಾಮಾಜಿಕ ಜಾಲತಾಣದಲ್ಲಿ ಜನರ ಗಮನ ಸೆಳೆಯುತ್ತಿದೆ.
ಈ ಬಗ್ಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಗಣೇಶನ ಹಬ್ಬಕ್ಕೂ ಮುನ್ನ ಮಕ್ಕಳಿಂದ ವಿನಾಯಕ ಆಕೃತಿ ರಚಿಸುವ ಮೂಲಕ ಚಾಲನೆ ನೀಡಲಾಗಿದೆ. ಈ ಮೂಲಕ ಹಬ್ಬಕ್ಕೆ ಮೆರಗು ನೀಡಲಾಗಿದೆ. ಇದಕ್ಕಾಗಿ ಮಕ್ಕಳು ಸುಮಾರು ಮೂರು ಗಂಟೆಗೂ ಅಧಿಕ ಸಮಯದ ತಾಲೀಮು ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಮಣ್ಣಿನಲ್ಲಿ ಗಣಪತಿ ಮಾಡುವ ಕಾರ್ಯಾಗಾರದಲ್ಲಿ ಶಾಲಾ ಮಕ್ಕಳು ಭಾಗಿ - clay Ganesha idol