ಹುಬ್ಬಳ್ಳಿ: ನಗರದ ಕಾಲೇಜು ಕ್ಯಾಂಪಸ್ನಲ್ಲಿ ಇಂದು ನಡೆದ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಮಾಹಿತಿ ನೀಡಿದ್ದಾರೆ. ಮೃತ ಯುವತಿ ನೇಹಾಳನ್ನು ಪ್ರೀತಿಸುತ್ತಿದ್ದುದಾಗಿ ಆರೋಪಿ ಫಯಾಜ್ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎಂದು ಅವರು ಹೇಳಿದರು.
" ತನ್ನನ್ನು ನೇಹಾ ಅವೈಯ್ಡ್ ಮಾಡುತ್ತಿದ್ದಳು ಎಂದು ವಿಚಾರಣೆ ವೇಳೆ ಆರೋಪಿ ಫಯಾಜ್ ಹೇಳಿಕೆ ನೀಡಿದ್ದಾನೆ. ಇದು ಆತನ ಹೇಳಿಕೆ ಆಗಿದ್ದು, ಇತರ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ‘‘ ಎಂದು ಕಮಿಷನರ್ ತಿಳಿಸಿದ್ದಾರೆ.
ಆರೋಪಿಯ ತಂದೆ-ತಾಯಿ ಶಿಕ್ಷಕರು: "ಆರೋಪಿ ಬೆಳಗಾವಿ ಜಿಲ್ಲೆಯವ. ಆತನ ತಂದೆ-ತಾಯಿ ಇಬ್ಬರು ಶಿಕ್ಷಕರೆಂದು ಗೊತ್ತಾಗಿದೆ. ಕೊಲೆ ಮಾಡಿ ತಪ್ಪಿಸಿಕೊಳ್ಳಲು ಆರೋಪಿ ಯತ್ನಿಸಿದ್ದಾನೆ. ಆದರೆ ಒಂದೇ ಗಂಟೆಯೊಳಗೆ ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವವರ ಮೇಲೆ ನಿಗಾ ವಹಿಸಲಾಗಿದೆ. ಸಂಘಟನೆಗಳ ಜೊತೆಗೂ ಮಾತನಾಡುತ್ತೇವೆ" ಎಂದರು.
ಮೃತಳ ತಂದೆ ನಿರಂಜನ ಹಿರೇಮಠ ಪ್ರತಿಕ್ರಿಯಿಸಿದ್ದು, "ನನ್ನ ಮಗಳು ಒಂದು ಇರುವೆಯನ್ನೂ ಹೊಡೆದವಳಲ್ಲ. ಅಂಥವಳನ್ನು ಬರ್ಬರವಾಗಿ ಕೊಲೆ ಮಾಡಿದ್ದು ನೋಡಿದರೆ ಮನಸ್ಥಿತಿ ಎಂತದ್ದಿರಬಹುದು. ಮಕ್ಕಳ ಮೇಲೆ ಪೋಷಕರು ಎಷ್ಟು ಕಣ್ಣಿಟ್ಟರೂ ಕಡಿಮೆ" ಎಂದು ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, "ಇದೊಂದು ನೋವಿನ ಸಂಗತಿ. ಆಕೆಯ ಪೋಷಕರಿಗೆ ಹೇಗೆ ಮಗಳೋ ನನಗೂ ಮಗಳಂತಿದ್ದಳು. ಯಾವಾಗಲೂ ಮನೆಗೆ ಹೋದಾಗ ಅಂಕಲ್ ಅಂತ ಕರೆಯುತ್ತಿದ್ದಳು. ಆರೋಪಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು" ಎಂದರು.
ಇದನ್ನೂಓದಿ: ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್ನಲ್ಲಿ ಯುವತಿಯ ಭೀಕರ ಕೊಲೆ; ಯುವಕನ ಬಂಧನ - Corporator Daughter Murder