ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರ ಭದ್ರತೆ, ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹು-ಧಾ ಪೊಲೀಸ್ ಘಟಕದ ಒಟ್ಟು 248 ಪೊಲೀಸ್ ಅಧಿಕಾರಿಗಳು ಏಕಕಾಲಕ್ಕೆ ಫೀಲ್ಡ್‌ಗಿಳಿದು ಚುರುಕಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಕಾರ್ಯಾಚರಣೆಯ ವಿವರ:
- ಹುಬ್ಬಳ್ಳಿ-ಧಾರವಾಡ ನಗರದಾದ್ಯಂತ 72 ರೌಡಿಶೀಟರ್ ಮತ್ತು 46 MOBಗಳ ಮನೆಗಳ (Surprise Visit) ತಪಾಸಣೆ ಮಾಡಲಾಗಿದ್ದು, ಯಾವುದೇ ಕಾನೂನು ಬಾಹಿರ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಮತ್ತು ಒಂದು ವೇಳೆ ಭಾಗಿಯಾದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿಲಾಗಿದೆ.
- ಸರಿಯಾದ ಸಮಯಕ್ಕೆ ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ಬಂದ್ ಮಾಡದೇ, ಲೈಸೆನ್ಸ್ ನಿಯಮ ಉಲ್ಲಂಘಿಸಿ ಅವಧಿ ಮೀರಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯುವುದರಿಂದ ನಗರದಲ್ಲಿ ಕಾನೂನು ಬಾಹಿರ ಮತ್ತು ಅಪರಾಧ ಚಟುವಟಿಕೆಗಳು ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಅವಳಿನಗರದ ಎಲ್ಲಾ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳನ್ನು ಸರಿಯಾದ ಸಮಯಕ್ಕೆ ಬಂದ್ ಆಗಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಅವುಗಳ ಮಾಲೀಕರಿಗೆ ಸರಿಯಾಗಿ ಸಮಯ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.
- ತಡರಾತ್ರಿ ನಗರದಲ್ಲಿ ಸಂಚರಿಸುತ್ತಿದ್ದ ಸುಮಾರು 150ಕ್ಕೂ ಹೆಚ್ಚು ವಾಹನಗಳನ್ನು ತಡೆದು ತಪಾಸಣೆ ಮಾಡಲಾಗಿದೆ. ಚೆಕ್ ಪೋಸ್ಟ್‌ಗಳಲ್ಲಿ ಕೂಡ 200ಕ್ಕೂ ಹೆಚ್ಚು ವಾಹನಗಳ ತಪಾಸಣೆ ನಡೆಸಲಾಗಿದ್ದು, ಅನಾವಶ್ಯಕವಾಗಿ ತಿರುಗಾಡುವಂತವರಿಗೆ ಸೂಕ್ತ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
- ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ 90ಕ್ಕೂ ಹೆಚ್ಚು ಜನರ ಬೆರಳುಮುದ್ರೆಗಳನ್ನು ಸ್ಕ್ಯಾನ್ ಮಾಡಿದ್ದು, ಅವರು ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಯೇ? ಎಂದು ತಪಾಸಣೆ ಮಾಡಲಾಗಿದೆ.
- ರಾತ್ರಿ ಗಸ್ತು ಸಿಬ್ಬಂದಿಯನ್ನು ಕೂಡ ನಿರಂತರವಾಗಿ ತಪಾಸಣೆ ಮಾಡಲಾಗಿದ್ದು, ಅಧಿಕಾರಿ ಮತ್ತು ಸಿಬ್ಬಂದಿ ಚುರುಕಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಯಿತು.
- ನಗರದ ಹೊರವಲಯಗಳಲ್ಲಿ ನಿರಂತರವಾಗಿ ಪೆಟ್ರೋಲಿಂಗ್ ಮಾಡಿ ನಿಗಾ ವಹಿಸಲಾಗಿದೆ. 112 ಸಹಾಯವಾಣಿ ವಾಹನಗಳು ಸಹ ಗಸ್ತು ತಿರುಗಲಿದ್ದು, ಸಾರ್ವಜನಿಕರು ಸಹಾಯಕ್ಕೆ ಕರೆಮಾಡಿದ ಕೇವಲ 05 ನಿಮಿಷದೊಳಗೆ ಘಟನಾ ಸ್ಥಳಕ್ಕೆ ಹಾಜರಿರಲಿವೆ.
- ಇದರೊಂದಿಗೆ ಚನ್ನಮ್ಮ ಪಡೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುವುದು.
- ಹೊರವಲಯ, ಒಂಟಿಮನೆಗಳ ಹತ್ತಿರ ಹೆಚ್ಚಿನ ನಿಗಾ ಇಡಲಾಗುವುದು.
ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಾರ್ವಜನಿಕರ ಸುರಕ್ಷತೆಯ ಕಾಪಾಡುವ ಹಾಗೂ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ರೀತಿಯ ವಿಶೇಷ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುವುದು. ರಾತ್ರಿ ಗಸ್ತು ಸಿಬ್ಬಂದಿ ಬೀಟ್ಗಳಿಗೆ ತೆರಳುವ ಮುನ್ನ ಠಾಣೆಯಲ್ಲಿ ರೋಲ್‌ಕಾಲ್ (ಹಾಜರಿ) ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಿ ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳಲಾಗುವುದು. ರಾತ್ರಿ ಗಸ್ತು ಅಧಿಕಾರಿ ಮತ್ತು ಸಿಬ್ಬಂದಿ ಅನಾವಶ್ಯಕವಾಗಿ ತಿರುಗಾಡುವವರ ಬೆರಳುಮುದ್ರೆಗಳನ್ನು ಸ್ಕ್ಯಾನ್ ಮಾಡಿ ಅಪಾರಾಧ ಹಿನ್ನೆಲೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: ಸಿಲಿಂಡರ್ ಸ್ಫೋಟ: ಐವರಿಗೆ ಗಂಭೀರ ಗಾಯ, ನಾಲ್ವರ ಸ್ಥಿತಿ ಚಿಂತಾಜನಕ - Cylinder blast
ಅವಳಿನಗರದ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವ ಮೂಲಕ ನಮ್ಮೊಂದಿಗೆ ಕೈ ಜೋಡಿಸುವಂತೆ ಹಾಗೂ ಯಾವುದೇ ರೀತಿಯ ತುರ್ತು ಸಹಾಯಕ್ಕಾಗಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲು ಈ ಮೂಲಕ ತಿಳಿಸಲಾಗಿದೆ ಎಂದು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.