ಬೆಳಗಾವಿ: ಬೆಳಗಾವಿಯ ಐತಿಹಾಸಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಅದ್ಧೂರಿಯಾಗಿ ಸಾಗಿದೆ. ಶಾಸಕರು, ಗಣ್ಯರು, ಅಧಿಕಾರಿಗಳು ಇಲ್ಲಿನ ಹುತಾತ್ಮ ಚೌಕ್ ನಲ್ಲಿ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ, ಬಾಲಗಂಗಾಧರ ಟಿಳಕ್ ಅವರ ಭಾವಚಿತ್ರಕ್ಕೆ ಗೌರವ ಸಮರ್ಪಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಭಯ್ ಪಾಟೀಲ, 11 ದಿನ ಯಶಸ್ವಿಯಾಗಿ ಗಣೇಶೋತ್ಸವ ಆಚರಿಸಿದ್ದು, ಈಗ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ಸಣ್ಣ– ಪುಟ್ಟ ಗೊಂದಲಗಳಿದ್ದರೆ ಪೊಲೀಸರು ಸ್ಥಳದಲ್ಲೇ ಬಗೆಹರಿಸಿ, ಪರಿಸ್ಥಿತಿ ಹತೋಟಿಗೆ ತರಬೇಕು. ಮಂಡಳಿಯವರೂ ಸಹಕಾರ ಕೊಡಬೇಕು ಎಂದರು.
ಭಾವೈಕ್ಯತೆ ಸಾರುತ್ತಿರುವ ಗಣೇಶೋತ್ಸವ ವೇದಿಕೆ: ಇನ್ನು ಬೆಳಗಾವಿ ಗಣೇಶೋತ್ಸವದಂತೆ ಈ ವೇದಿಕೆಯೂ ಭಾವೈಕ್ಯತೆ ಸಾರುತ್ತಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅಮರ್, ಅಕ್ಬರ್, ಅಂಥೋನಿಯಂತೆ ಗಣೇಶನಿಗೆ ಪೂಜಿಸಿ ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಎಲ್ಲ ಸಮುದಾಯದವರೂ ಸಹೋದರರಂತೆ ಇರೋಣ: ಶಾಸಕ ಆಸೀಫ್ ಸೇಠ್ ಮಾತನಾಡಿ, ವಿವಿಧತೆಯಲ್ಲಿ ಏಕತೆ ಕಾಣುವ ದೇಶ ಭಾರತ. ಬೆಳಗಾವಿಯಲ್ಲಿ ನಡೆಯಲಿರುವ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಅದ್ದೂರಿಯಾಗಿ ನಡೆಯುವ ಉದ್ದೇಶದಿಂದ ಈದ್–ಮಿಲಾದ್ ಮೆರವಣಿಗೆಯನ್ನು ಮುಸ್ಲಿಂರೆಲ್ಲರೂ ಸೇರಿಕೊಂಡು ಮುಂದೂಡಿದ್ದೇವೆ. ಈಗ ಎಲ್ಲ ಸಮುದಾಯದವರೂ ಸಹೋದರರಂತೆ ಮೆರವಣಿಗೆಯಲ್ಲಿ ಪಾಲ್ಗೊಂಡು, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡೋಣ ಎಂದು ಕರೆ ನೀಡಿದರು.
ನಾವೆಲ್ಲರೂ ಒಂದೇ - ಡಿಸಿ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಶಾಂತಿ, ಸಂಹಿಷ್ಣುತೆ ಮತ್ತು ಸೌಹಾರ್ದತೆ ಸಂದೇಶವನ್ನು ಸಾರೋಣ. ಎಲ್ಲರೂ ಸುರಕ್ಷತೆಯಿಂದ ಅದ್ಧೂರಿಯಾಗಿ ಗಣೇಶೋತ್ಸವ ಆಚರಿಸಬೇಕು. ಇಂದಿನ ವೇದಿಕೆ ಮೇಲೆ ಎಲ್ಲ ಧರ್ಮ, ಜಾತಿಗಳ ಜನರು ಇದ್ದೇವೆ. ಈ ಮೂಲಕ ನಾವೆಲ್ಲರೂ ಒಂದೇ ಎನ್ನುವುದಕ್ಕೆ ಈ ವೇದಿಕೆಗಿಂತ ಮತ್ತೊಂದು ಒಳ್ಳೆಯ ಉದಾಹರಣೆ ಸಿಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ, ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಬಿಜೆಪಿ ಮುಖಂಡರಾದ ಮಹಾಂತೇಶ ಕವಟಗಿಮಠ, ಅನಿಲ ಬೆನಕೆ ಸೇರಿ ಮತ್ತಿತರರು ಇದ್ದರು.
ಟ್ರ್ಯಾಕ್ಟರ್ ಚಲಾಯಿಸಿದ ಶಾಸಕ: ಗಣೇಶ ಮೂರ್ತಿಯ ಟ್ರ್ಯಾಕ್ಟರನ್ನು ಸ್ವತಃ ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದರು. ಅವರಿಗೆ ಬಿಜೆಪಿ ಮುಖಂಡರಾದ ಮಹಾಂತೇಶ ಕವಟಗಿಮಠ, ಅನಿಲ ಬೆನಕೆ ಸಾಥ್ ನೀಡಿದರು. ಡೋಲ್ ಥಾಷಾ ಬಾರಿಸಿದ ಗಣ್ಯರು: ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಡೋಲ್ ಥಾಷಾ ಬಾರಿಸಿ ಗಮನ ಸೆಳೆದರು.