ಬೆಂಗಳೂರು: 2023ರ ಆಗಸ್ಟ್ ತಿಂಗಳಿಗಿಂತಲೂ ಮುನ್ನ ಸ್ನಾತಕೋತ್ತರ ವೈದ್ಯಕೀಯ ಪದವಿ ಪೂರೈಸಿದ ಅಭ್ಯರ್ಥಿಗಳು ಕಡ್ಡಾಯ ಗ್ರಾಮೀಣ ಸೇವೆಗೆ ನೋಂದಾಯಿಸಿಕೊಳ್ಳಬೇಕು ಎಂಬ ಆದೇಶಕ್ಕೆ ಹೈಕೋರ್ಟ್ ಏಕ ಸದಸ್ಯ ಪೀಠ ಮಧ್ಯಂತರ ತಡೆ ನೀಡಿದೆ. ಡಾ. ಸುವೇತಾ ಪಿ ಎಂಬುವರು ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, 2023ರ ಆಗಸ್ಟ್ ತಿಂಗಳಿಗಿಂತಲೂ ಮುಂಚೆ ಸ್ನಾತಕೋತ್ತರ ವೈದ್ಯಕೀಯ ಪದವಿ ಪೂರೈಸಿದ ಅಭ್ಯರ್ಥಿಗಳು ಕಡ್ಡಾಯ ಗ್ರಾಮೀಣ ಸೇವೆಗೆ ನೋಂದಾಯಿಸಿಕೊಳ್ಳಬೇಕು ಎಂದು ಸರ್ಕಾರ 2024ರ ಜು.12ರಂದು ಹೊರಡಿಸಿರುವ ಆದೇಶ ಜಾರಿಗೆ ಮುಂದಿನ ಆದೇಶದವರೆಗೆ ಮಧ್ಯಂತರ ತಡೆ ನೀಡಲಾಗುವುದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರ ಅಭ್ಯರ್ಥಿಗಳು 2023ರ ಆಗಸ್ಟ್ ತಿಂಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಅವರು ಕೋರ್ಸ್ ಪೂರ್ಣಗೊಳಿಸುವ ಮುನ್ನವೇ ವೈದ್ಯಕೀಯ ಕೋರ್ಸ್‌ಗಳನ್ನು ಮಾಡಿದ ಅಭ್ಯರ್ಥಿಗಳ ಕರ್ನಾಟಕ ಕಡ್ಡಾಯ ಸೇವಾ ಕಾಯ್ದೆ (ತಿದ್ದುಪಡಿ)2023 ಜಾರಿಗೆ ಬಂದಿದೆ. ತಿದ್ದುಪಡಿ ಕಾಯ್ದೆಯ ಪ್ರಕಾರ ಕಾಯ್ದೆಯನ್ನು ಪೂರ್ವಾನ್ವಯ ಮಾಡುವಂತಿಲ್ಲ. ಹಾಗಾಗಿ ಅದು ಅರ್ಜಿದಾರರಿಗೆ ಅನ್ವಯವಾಗುವುದಿಲ್ಲ ಎಂದರು. ಅಲ್ಲದೆ, ಕಡ್ಡಾಯ ಗ್ರಾಮೀಣ ಸೇವಾ ನಿಯಮ ಕಾನೂನು ಬಾಹಿರ, ಏಕಪಕ್ಷೀಯ ಮತ್ತು ಸರ್ಕಾರಕ್ಕೆ ಅಂತಹ ಯಾವುದೇ ಅಧಿಕಾರವಿಲ್ಲ. ಹಾಗಾಗಿ ಆ ತಿದ್ದುಪಡಿಯನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.
ಇದಕ್ಕೂ ಮುನ್ನ ನ್ಯಾಯಪೀಠ, ನೋಂದಣಿ ಪ್ರಕ್ರಿಯೆಯನ್ನು ಒಂದು ವಿಧಾನವಾಗಿ ರೂಪಿಸಲಾಗಿದೆ. ಇದರಲ್ಲಿ ಅರ್ಜಿದಾರರು ಸೂಕ್ತ ಮಧ್ಯಂತರ ಪರಿಹಾರವನ್ನು ನ್ಯಾಯಾಲಯದಿಂದ ಕೋರಬಹುದಾಗಿದೆ ಎಂದು ಹೇಳಿತು.
ಇದನ್ನೂ ಓದಿ: ಆಂಬ್ಯುಲೆನ್ಸ್ ಸಿಬ್ಬಂದಿ, ವೇತನ ಮತ್ತಿತರರ ವಿಚಾರಗಳ ಮಾಹಿತಿ ನೀಡಲು ಹೈಕೋರ್ಟ್ ಸೂಚನೆ - High Court