ಬೆಂಗಳೂರು: ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿಯೇ ಅರ್ಧ ಪಾಕಿಸ್ತಾನ ಇದೆ ಎಂದು ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾದ ಎರಡು ಪ್ರತ್ಯೇಕ ಎಫ್ಐಆರ್ಗಳಿಗೆ ಹೈಕೋರ್ಟ್ ಇಂದು ತಡೆಯಾಜ್ಞೆ ನೀಡಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ತಮ್ಮ ವಿರುದ್ಧ ದಾಖಲಿಸಲಾದ ಎಫ್ಐಆರ್ ರದ್ದು ಕೋರಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ದಿನೇಶ್ ಗುಂಡೂರಾವ್ ಮನಬಂದಂತೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅರ್ಜಿದಾರರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರು ಸಚಿವರ ಪತ್ನಿಯ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. 'ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ' ಎಂದಿದ್ದಾರೆಯೇ ಹೊರತು ಅವರ ಪತ್ನಿ ಪಾಕಿಸ್ತಾನದವರು ಎಂದಿಲ್ಲ. ದೂರುದಾರರು (ಪತ್ನಿ) ತನ್ನನ್ನು ಪಾಕಿಸ್ತಾನದ ಉಗ್ರಗಾಮಿಗಳಿಗೆ ಹೋಲಿಸಿರುವುದಾಗಿ ಹೇಳಿದ್ದಾರೆ. ಇದು ಅವರ ಊಹೆ. ಇಂತಹ ಹೇಳಿಕೆಯಿಂದ ದಂಪತಿ ಅನುಕಂಪ ಗಳಿಸುವ ಉದ್ದೇಶ ಹೊಂದಿರಬಹುದು. ಆದರೆ ಇದಕ್ಕೆ ಅರ್ಜಿದಾರರು ಯಾವುದೇ ಜವಾಬ್ದಾರರಲ್ಲ ಎಂದು ವಿವರಿಸಿದರು.
ಅಲ್ಲದೆ, ದೂರುದಾರರು ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಪಾಕಿಸ್ತಾನ ಒಂದು ದೇಶ, ಧರ್ಮವಲ್ಲ. ಅರ್ಜಿದಾರರು ಧರ್ಮದ ನಡುವೆ ದ್ವೇಷ ಹುಟ್ಟು ಹಾಕುವ ಯಾವುದೇ ಹೇಳಿಕೆಯನ್ನಾಗಲಿ ವರ್ತನೆಯನ್ನಾಗಲಿ ತೋರಲಿಲ್ಲ. ಅಲ್ಲದೆ, ಲೋಕಸಭಾ ಚುನಾವಣಾ ಲಾಭ ಪಡೆಯುವುದಕ್ಕಾಗಿ ಈ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಅರ್ಜಿದಾರರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಹಾಗಾಗಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಯತ್ನಾಳ್ ಕುಟುಂಬ ಒಡೆತನದ ಸಿದ್ಧಸಿರಿ ಎಥೆನಾಲ್ ಘಟಕ ಬಂದ್ ಆದೇಶಕ್ಕೆ ಕಾರಣ ನೀಡಬೇಕು: ಹೈಕೋರ್ಟ್ - Siddhasiri ethanol unit
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೊಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತನ ವಿಚಾರಣೆ ನಡೆಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ದಿನೇಶ್ ಗುಂಡೂರಾವ್ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ಏಪ್ರಿಲ್ 6ರಂದು ಸುದ್ದಿಗಾರರ ಜೊತೆ ಮಾತನಾಡಿದ್ದ ಶಾಸಕ ಯತ್ನಾಳ್, ಸಚಿವ ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ. ದೇಶ ವಿರೋಧಿ ಹೇಳಿಕೆ ಕೊಡುವುದು ಗುಂಡುರಾವ್‌ಗೆ ಚಟವಾಗಿದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಯತ್ನಾಳ್ ವಿರುದ್ಧ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ಗುಂಡೂರಾವ್ ಅವರು, ಯತ್ನಾಳ್ ಅವರು ನಮ್ಮ ಕುಟುಂಬದ ಗೌರವ ಹಾಳು ಮಾಡುವ ದುರುದ್ದೇಶದಿಂದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ನಮ್ಮ ಭಾವನೆಗಳಿಗೆ ನೋವುಂಟು ಮಾಡಿ, ಸಾರ್ವಜನಿಕವಾಗಿ ಅವಹೇಳನ ಮಾಡಿರುವ ಯತ್ನಾಳ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ದಾಖಲಿಸಿದ್ದರು. ಈ ದೂರನ್ನು ವಿಜಯಪುರದ ಪಿ.ಎಸ್.ಗಾಂಧಿ ಚೌಕ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಇದೇ ಆರೋಪ ಸಂಬಂಧ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಎಸ್.ಬಿ.ಜಿದ್ದಿಮನಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು. ಇದನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.