ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ(ಕೆಪಿಟಿಸಿಎಲ್)ದಲ್ಲಿ ನೌಕರರ ವೇತನ ಹಾಗೂ ಪಿಂಚಣಿ ಮರು ನಿಗದಿ ಮಾಡುವಂತೆ ಸೂಚನೆ ನೀಡಿ ಆದೇಶಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ.
ಕೆಪಿಟಿಸಿಎಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯಪೀಠ ನಿವೃತ್ತ ಉದ್ಯೋಗಿಗಳ ವೇತನ ಹಾಗೂ ಪಿಂಚಣಿ ಮರು ನಿಗದಿ ಸಂಬಂಧ ಏಕಸದಸ್ಯಪೀಠ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.
ಅಲ್ಲದೆ, ತಮ್ಮ ಕೈಯಲ್ಲಿ ಬಲವಿದ್ದಾಗ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತರಾಗಿ ಇದೀಗ ಜೀವನದ ಸಂಧ್ಯಾಕಾಲದಲ್ಲಿರುವ ಪಿಂಚಣಿದಾರರನ್ನು ಮೃದು ಕೈಗಳಿಂದ ನೋಡಬೇಕಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಜತೆಗೆ ಕೆಪಿಟಿಸಿಎಲ್ ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆಯಾಗಿರುವುದರಿಂದ ಅದು ಕಲಂ 12ರ ಪ್ರಕಾರ ರಾಜ್ಯದ ವ್ಯಾಖ್ಯಾನಕ್ಕೆ ಒಳಪಡುತ್ತದೆ. ಕಲ್ಯಾಣ ರಾಜ್ಯದಲ್ಲಿ ಪಿಂಚಣಿದಾರರನ್ನು ಮೃದು ಧೋರಣೆಯಿಂದ ನೋಡಬೇಕಿದೆ ಎಂದು ನ್ಯಾಯಪೀಠ ಆದೇಶಿಸಿದೆ.
ನಿಗಮದ ಪರ ವಕೀಲರು, ಸುಪ್ರೀಂಕೋರ್ಟ್ ಕೆಪಿಟಿಸಿಎಲ್ ವರ್ಸಸ್ ಸಿ.ಪಿ. ಮುಂದಿನಮನಿ ಪ್ರಕರಣದಲ್ಲಿ ಉದ್ಯೋಗಿಗಳಿಗೆ ಇಂತಹುದೇ ಪರಿಹಾರವನ್ನು ಒದಗಿಸಲಾಗಿದೆ. ಹಾಗಾಗಿ ಈ ಮೊದಲು ನಿವೃತ್ತರಾದ ಉದ್ಯೋಗಿಗಳಿಗೆ ಅದೇ ರೀತಿಯಲ್ಲಿ ಪರಿಹಾರ ನೀಡಲಾಗದು ಎಂದ ಪೀಠಕ್ಕೆ ವಿವರಿಸಿದ್ದರು.
ಕೆಪಿಟಿಸಿಎಲ್ ತನ್ನ ಮುಂದಿಟ್ಟಿದ್ದ ಎಲ್ಲ ವಾದಗಳನ್ನು ತಳ್ಳಿಹಾಕಿದ ನ್ಯಾಯಾಲಯ, ಏಕ ಸದಸ್ಯಪೀಠದ ಆದೇಶದಿಂದಾಗಿ ಉದ್ಯೋಗಿಗಳಿಗೆ ಸಣ್ಣ ಪ್ರಮಾಣದ ಇಂಕ್ರಿಮೆಂಟ್ ನೀಡಬೇಕಾಗುತ್ತದೆ. ಇದರಿಂದರಿಂದ ನಿಗಮದ ಬಜೆಟ್ ಮೇಲೆ ಅಂತಹ ಹೊರೆ ಆಗುವುದಿಲ್ಲ. ಹಲವು ವರ್ಷಗಳ ಕಾಲ ನಿಗಮಕ್ಕಾಗಿ ದುಡಿದಿರುವವರಿಗೆ ಸಣ್ಣ ಮೊತ್ತವನ್ನು ನೀಡುವುದರಿಂದ ಆಕಾಶವೇನೂ ಕಳಚಿ ಬೀಳವುದಿಲ್ಲ ಎಂದು ಪೀಠ ತನ್ನ ಆದೇದಲ್ಲಿ ತಿಳಿಸಿದೆ. ಅಲ್ಲದೆ, ಉದ್ಯೋಗಿಗಳು ವಿಭಿನ್ನ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರೂ ಸಹ ಅವರಿಗೆ ವರ್ಷಾವಾರು ಸೇವೆ ಪರಿಗಣಿಸಿ ಇಂಕ್ರಿಮೆಂಟ್ ನೀಡಬೇಕಾಗುತ್ತದೆ. ಅದರ ಪಾವತಿಯಿಂದ ನಿಗಮ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಪ್ರಕರಣ ಹಿನ್ನೆಲೆ: ತುಮಕೂರಿನ ಎಲ್.ಮಲ್ಲಿಕಾರ್ಜುನಪ್ಪ ಸೇರಿದಂತೆ 30ಕ್ಕೂ ಅಧಿಕ ನಿವೃತ್ತ ಉದ್ಯೋಗಿಗಳು ಕೆಪಿಟಿಸಿಎಲ್ ತಮಗೆ ಸರಿಯಾಗಿ ವೇತನ ಹಾಗೂ ಪಿಂಚಣಿ ನಿಗದಿ ಮಾಡಿಲ್ಲ ಎಂದು ಏಕ ಸದಸ್ಯಪೀಠದ ಮೊರೆ ಹೋಗಿದ್ದರು. ಏಕಸದಸ್ಯಪೀಠ 2023ರ ಡಿ.15ರಂದು ವಾರ್ಷಿಕ ಹೆಚ್ಚುವರಿ ಇಂಕ್ರಿಮೆಂಟ್ ನೀಡುವ ಜತೆಗೆ ಅವರ ವೇತನ ಮರು ನಿಗದಿಪಡಿಸಬೇಕು ಮತ್ತು ಆನಂತರ ಪಿಂಚಣಿಯನ್ನು ಮರು ನಿಗದಿ ಮಾಡಿ ಬಾಕಿ ಸಹಿತ ಪಾವತಿಸಬೇಕು ಎಂದು ಆದೇಶ ನೀಡಿತ್ತು. ಆ ಆದೇಶ ಪ್ರಶ್ನಿಸಿ ಕೆಪಿಟಿಸಿಎಲ್ ಮೇಲ್ಮನವಿ ಸಲ್ಲಿಸಿತ್ತು.