ಬೆಂಗಳೂರು: ಮೈಸೂರು, ಮಂಡ್ಯ ಸೆರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿನ ಗರ್ಭಿಣಿಯರ ಭ್ರೂಣ ಲಿಂಗ ಪತ್ತೆ ಮಾಡಿ, ಗರ್ಭಪಾತಕ್ಕೆ ಪ್ರೇರೇಪಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಭ್ರೂಣ ಹತ್ಯೆಗೆ ಪ್ರೇರೇಪಿಸಿದ್ದ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ. ಜೊತೆಗೆ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲು ಸೂಚನೆ ನೀಡಿದೆ.
ಪ್ರಕರಣದ ಆರೋಪಿಗಳಾಗಿದ್ದು, ಬಂಧನ ಭೀತಿ ಎದುರಿಸುತ್ತಿದ್ದ ನಾಗಮಂಗಲ ತಾಲೂಕಿನ ದೇವರಮಾವಿನಕೆರೆ ಗ್ರಾಮದ ನಿವಾಸಿ ಧನಂಜೇಗೌಡ ನಿವಾಸಿ, ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಎ.ಎಲ್.ಸತೀಶ್ ಮತ್ತು ಮೈಸೂರು ತಾಲೂಕಿನ ನಾಡನಹಳ್ಳಿ ಗ್ರಾಮದ ಪುಟ್ಟರಾಜು ಎಂಬವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಪ್ರಕರಣದಲ್ಲಿ ಅರ್ಜಿದಾರರು 6,7 ಮತ್ತು 9ನೇ ಆರೋಪಿಗಳಾಗಿದ್ದು, ಗರ್ಭಿಣಿಯರನ್ನು ಗುರುತಿಸಿವ ಮಧ್ಯವರ್ತಿಗಳಾಗಿದ್ದಾರೆ. ಅಕ್ರಮವಾಗಿ ಗರ್ಭಪಾತಕ್ಕೆ ಒಳಗಾಗುವಂತೆ ಪ್ರೇರೇಪಿಸಿರುವ ಗಂಭೀರ ಸ್ವರೂಪದ ಆರೋಪ ಇದಾಗಿದೆ. ಜೊತೆಗೆ, ಆರೋಪ ಸಂಬಂಧ ಪ್ರಕರಣ 2024ರ ಏಪ್ರಿಲ್ 24ರಂದು ದಾಖಲಾಗಿದ್ದು, ಈವರೆಗೂ ಆರೋಪಿಗಳು ವಿಚಾರಣೆಗೆ ಹಾಜರಾಗಿಲ್ಲ. ಆದ್ದರಿಂದ ಪ್ರಕರಣದ ಸ್ವರೂಪವನ್ನು ಪರಿಗಣಿಸಿ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಲು ಅರ್ಹರಲ್ಲ ಎಂದು ತಿಳಿಸಿರುವ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು, ಭ್ರೂಣಗಳ ಆರೋಗ್ಯ ಪರೀಕ್ಷೆಗಾಗಿ ಲ್ಯಾಬ್‌ಗಳಿಗೆ ಬರುವ ಮಹಿಳೆಯರಿಗೆ ಭ್ರೂಣ ಪತ್ತೆಗೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತಿದ್ದರು. ಬಳಿಕ ಅವರಿಗೆ ಭ್ರೂಣ ಹತ್ಯೆಗೆ ಪ್ರೇರೇಪಿಸುತ್ತಿದ್ದರು. ಬಳಿಕ ಪ್ರಕರಣದಲ್ಲಿ ಇನ್ನಿತರ ಆರೋಪಿಗಳೊಂದಿಗೆ ಮಂಡ್ಯ ಜಿಲ್ಲೆಯ ಹಾಡ್ಯ ಗ್ರಾಮದಲ್ಲಿ ಆಲೆಮನೆಯಲ್ಲಿ ಪರೀಕ್ಷೆ ಮಾಡಿಸಿ ಹೆಣ್ಣು ಮಗು ಎಂದು ಗೊತ್ತಾದರೆ, ಗರ್ಭಪಾತ ಮಾಡಿಸುತ್ತಿದ್ದರು. ಕಮಿಷನ್ ರೂಪದಲ್ಲಿ ಹಣ ಪಡೆದುಕೊಳ್ಳುತ್ತಿದ್ದರು. ಈ ಸಂಬಂಧ ಮಾಹಿತಿ ಪಡೆದ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮೂಸೂರಿನ ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 312(ಗರ್ಭಪಾತ), 314(ಗರ್ಭಪಾತದಿಂದ ಉಂಟಾದ ಸಾವು), 315(ಮಗು ಸಜೀವವಾಗಿ ಜನನವಾಗದಂತೆ ಮಾಡುವುದು) 316(ಗಭಾವಸ್ಥೆಯಲ್ಲಿ ನರ ಹತ್ಯೆ) ಮತ್ತು ವೈದ್ಯಕೀಯ ಗರ್ಭಸಮಾಪನ ಅಧಿನಿಯಮ 1971 ಸೆಕ್ಷನ್ 4ರ(ಗರ್ಭದಾರಣೆ ಕೊನೆಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿ ಮೊರೆ ಹೋಗಿದ್ದರು.
ಇದನ್ನೂ ಓದಿ: ಖಾಸಗಿ ಕ್ಷೇತ್ರದಲ್ಲಿ ಸ್ಥಳೀಯರಿಗೆ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ - Job Reservation For Locals