ಬೆಂಗಳೂರು: ರೇಡಿಯೋ ಡಯಾಗ್ನೋಸಿಸ್ ವೈದ್ಯಕೀಯ ಸ್ನಾತಕೋತ್ತರ ಸೀಟ್ ಬ್ಲಾಕಿಂಗ್ ಮತ್ತು ಕಾನೂನು ಬಾಹಿರವಾಗಿ ಡಾ.ಸುನೀಲ್ ಕುಮಾರ್ ಎಂಬುವರಿಗೆ ಸೀಟು ಹಂಚಿಕೆ ಮಾಡಿದ ಆರೋಪ ಪ್ರಕರಣ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಟ್ 5 ಲಕ್ಷ ರೂ.ಗಳ ದಂಡ ವಿಧಿಸಿ ಆದೇಶಿಸಿದೆ. ಡಾ.ಸಿ.ಕೆ. ರಜಿನಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್.ದಿನೇಶ್ ಕುಮಾರ್ ಮತ್ತು ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ದಂಡದ ಮೊತ್ತದಲ್ಲಿ 2.5 ಲಕ್ಷ ರೂ.ಗಳನ್ನು ಪ್ರಕರಣದ ಅರ್ಜಿದಾರರಾದ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಡಾ.ಸಿ.ಕೆ.ರಜನಿ ಅವರಿಗೆ ಪಾವತಿಸಬೇಕು. ಉಳಿದ 2.5 ಲಕ್ಷ ರೂ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಹೆಸರಿನಲ್ಲಿ ಠೇವಣಿ ಇಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ. ಜೊತೆಗೆ, ಅರ್ಜಿದಾರರಿಗೆ ರೇಡಿಯೋ ಡಯಾಗ್ನೋಸಿಸ್ ಸೀಟನ್ನು ಮರು ಹಂಚಿಕೆ ಮಾಡಬೇಕು ಎಂದು ನಿರ್ದೇಶನ ನೀಡಿದೆ.
ವೈದ್ಯಕೀಯ ಸ್ನಾತಕೋತ್ತರ ವಿಭಾಗದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಕ್ಕೆ ಅರ್ಜಿದಾರರು ಪಾವತಿಸಿರುವ ಶುಲ್ಕವನ್ನು ಎಂ.ಆರ್. ವೈದ್ಯಕೀಯ ಕಾಲೇಜಿನ ರೇಡಿಯೋ ಡಯಾಗ್ನೋಸಿಸ್ ಸೀಟಿಗೆ ಸರಿಹೊಂದಿಸಬೇಕು ಎಂದು ಪೀಠ ತಿಳಿಸಿದೆ.
2023ರ ಸೆಪ್ಟಂಬರ್ 19ರಂದು ಸುನೀಲ್ ಕುಮಾರ್ಗೆ ಕೌನ್ಸಿಲಿಂಗ್ನಿಂದ ಹಿಂದೆ ಸರಿಯಲು ಅನುಮತಿ ನೀಡಲಾಗಿತ್ತು. ಆದರೆ, ರೇಡಿಯೋಗ್ನಾಸಿಸ್ ಸೀಟು 2023ರ ಅಕ್ಟೋಬರ್ 6 ರವರೆಗೂ ಲಭ್ಯವಿರುವುದಾಗಿ ಕೆಇಎ ತೋರಿಸಿಕೊಂಡು ಬಂದಿದೆ. ಜೊತೆಗೆ, ಅದೇ ದಿನ ಮಧ್ಯಾಹ್ನ 2.40ರ ಸಮಯಕ್ಕೆ ಸುನೀಲ್ ಕುಮಾರ್ ಎಂಬುವರಿಗೆ ಸೀಟಿ ಹಂಚಿಕೆಯಾಗಿರುವುದಾಗಿ ಪ್ರಕಟಿಸಿದೆ. ಈ ಬೆಳವಣಿಗೆ ಸುನೀಲ್ ಕುಮಾರ್ ಎಂಬುವರಿಗೆ ನಕಲಿಯಾಗಿ ಸೀಟು ಹಂಚಿಕೆ ಮಾಡಿದೆ ಎಂಬ ಅಂಶ ಗೊತ್ತಾಗಲಿದೆ ಎಂದು ಪೀಠ ತಿಳಿಸಿದೆ. ಜೊತೆಗೆ, ರೇಡಿಯೋ ಡಯಾಗ್ನೋಸಿಸ್ನಲ್ಲಿ ಅರ್ಜಿದಾರರಿಗೆ ಸೀಟು ಲಭ್ಯವಿಲ್ಲದಂತೆ ಮಾಡಲಾಗಿತ್ತು. ಅವರಿಗೆ ಇಷ್ಟವಿಲ್ಲದ ಸ್ತ್ರೀರೋಗಶಾಸ್ತ್ರದಲ್ಲಿ ಸೀಟು ಪಡೆದುಕೊಳ್ಳುವಂತೆ ಒತ್ತಾಯ ಮಾಡಿ ಅದನ್ನೇ ಆಯ್ಕೆ ಮಾಡಿಕೊಳ್ಳುವಂತೆ ಮಾಡಲಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಸ್ನಾತಕೋತ್ತರ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಭಾಗಗಳಲ್ಲಿ ಸೀಟು ಪಡೆಯುವುದು ಅತ್ಯಂತ ಕಷ್ಟಕರವಾಗಿರಲಿದೆ. ಸರ್ಕಾರದ ಕಾನೂನು ನಿಯಮವನ್ನು ಯಾರೇ ಉಲ್ಲಂಘಿಸಿದರೂ ಕಾನೂನು ಉಲ್ಲಂಘಿಸಿದಂತೆ ಆಗಲಿದ್ದು, ಅದನ್ನು ಸಹಿಸಲಾಗುವುದಿಲ್ಲ. ಸ್ನಾತಕೋತ್ತರ ವೈದ್ಯಕೀಯ ಸೀಟು ಹಂಚಿಕೆ ವಿಚಾರದಲ್ಲಿ ಪರೀಕ್ಷಾ ಪ್ರಾಧಿಕಾರ ಈ ರೀತಿಯಲ್ಲಿ ನಿಭಾಯಿಸಿರುವುದು ದುರದೃಷ್ಟಕರ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು ? ಅರ್ಜಿದಾರರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಆನೆಗೊಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿಯಲ್ಲಿ ಶೇ.20 ಸೀಟುಗಳನ್ನು ನಿಗದಿಪಡಿಸಿ 2023 ಆಗಸ್ಟ್ 19 ರಂದು ವೈದ್ಯಕೀಯ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಗೆ ಅನುಸಾರವಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು 315 ಸೀಟುಗಳನ್ನು ಸೇವೆಯಲ್ಲಿರುವ ವೈದ್ಯರಿಗೆ ನಿಗದಿ ಪಡಿಸಿತ್ತು. ಅಕ್ಟೋಬರ್ 2, 2023 ರ 2ನೇ ಸುತ್ತಿನ ಕೌನ್ಸಲಿಂಗ್ ಅಧಿಸೂಚನೆಯ ಪ್ರಕಾರ ಕಲಬುರಗಿಯ ಎಂಆರ್ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ರೇಡಿಯೋ ಡಯಾಗ್ನೋಸಿಸ್ ಸೀಟನ್ನು ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿತ್ತು. ಅರ್ಜಿದಾರರ ಕಲಬುರಗಿಯ ಎಂಆರ್ಎಂಸಿ ವೈದ್ಯಕೀಯ ಕಾಲೇಜಿನಲ್ಲಿ ರೇಡಿಯೋ ಡಯಾಗ್ನೋಸಿಸ್ ಸ್ನಾತಕೋತ್ತರ ಪದವಿಯನ್ನು ತಮ್ಮ ಮೂರನೇ ಆಯ್ಕೆಯಾಗಿ ಆರಿಸಿಕೊಂಡಿದ್ದರು.
2023ರ ಸೆಪ್ಟಂಬರ್ 19ರಂದು ನಡೆದ ಎರಡನೇ ಸುತ್ತಿನ ಕೌನ್ಸಲಿಂಗ್ನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಸೀಟ್ ಪಡೆದುಕೊಳ್ಳುವಂತೆ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ, 2023 ಅಕ್ಟೋಬರ್ 20ರಂದು ಇಎಸ್ಐ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುನೀಲ್ಕುಮಾರ್ ಅವರಿಗೆ ರೇಡಿಯೋ ಡಯಾಗ್ನೋಸಿಸ್ ವಿಭಾಗದಲ್ಲಿ ಸೀಟು ಹಂಚಿಕೆ ಮಂಜೂರು ಮಾಡಲಾಗಿತ್ತು.
ಈ ನಡುವೆ ಕೆ.ವಿ.ನಾಗರಾಜು ಎಂಬುವವರು ರಾಯಚೂರಿನ ವೈದ್ಯಕೀಯ ಕಾಲೇಜಿನಲ್ಲಿ ಚರ್ಮರೋಗದಲ್ಲಿ ಸ್ನಾತಕೋತ್ತರ ಪದವಿಗೆ ಸೀಟು ಪಡೆದುಕೊಂಡಿದ್ದರು. ಆದರೆ, ಎರಡನೇ ಸುತ್ತಿನ ಕೌನ್ಸಲಿಂಗ್ನಲ್ಲಿಯೂ ಭಾಗಿಯಾಗಿ ಚರ್ಮರೋಗಶಾಸ್ತ್ರದ ಸೀಟನ್ನು ರದ್ದುಪಡಿಸಿ, ರೇಡಿಯೋ ಡಯಾಗ್ನಾಸಿಸ್ಗೆ ಆಯ್ದುಕೊಂಡಿದ್ದರು. ಈ ಆಯ್ಕೆ ಪಟ್ಟಿ ಪ್ರಕಟಣೆವಾಗಲು ವಿಳಂಬವಾಗಿತ್ತು. ಈ ನಡುವೆ ಡಾ.ನಾಗರಾಜು ಅವರು ತಮ್ಮ ಸೀಟನ್ನು ಎರಡನೇ ಸುತ್ತಿನಲ್ಲಿ ಪಡೆದ ಡಯೋಗ್ನಾಸಿಸ್ ಸೀಟನ್ನು ಹಿಂದಿರುಗಿಸಿಕೊಂಡಿದ್ದರು. ಆದ ಪರಿಣಾಮ ಅಂತಿಮ ಸುತ್ತಿನಲ್ಲಿ(ಮಾಪ್ ಆಫ್ ರೌಂಡ್) ಡಾ. ಸುನೀಲ್ ಕುಮಾರ್ ಅವರಿಗೆ ಹಂಚಿಕೆಯಾಗಿತ್ತು. ಆ ಮೂಲಕ ಅರ್ಜಿದಾರರಿಗೆ ರೇಡಿಯೋ ಡಯಾಗ್ನೋಸಿಸ್ ಸೀಟು ತಪ್ಪಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಆಧಾರ್ ನೈಜತೆ ಪರಿಶೀಲಿಸಿ ನೋಂದಣಿ ಕಾರ್ಯ ನಡೆಸಿ: ಹೈಕೋರ್ಟ್