ಬೆಂಗಳೂರು: ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 2019ರಲ್ಲಿ ಮಂಜೂರಾದ ಅನುದಾನದಲ್ಲಿ ಬಾಕಿ ಇರುವ 78 ಕೋಟಿ ರೂ. ಶೀಘ್ರ ಬಿಡುಗಡೆಗೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸ್ಥಳೀಯ ಶಾಸಕ ಎಸ್. ಮುನಿರಾಜು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಶಾಸಕ ಎಸ್. ಮುನಿರಾಜು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗೂ ನ್ಯಾ. ಕೆ.ವಿ. ಅರವಿಂದ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ 2019ರಲ್ಲಿ 570 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿತ್ತು. ನಂತರ ಅದನ್ನು ರದ್ದುಪಡಿಸಲಾಯಿತು. ಅನುದಾನ ಮರು ನಿಗದಿಪಡಿಸಿ 110 ಕೋಟಿ ರೂ.ಗಳನ್ನು ನೀಡಲಾಯಿತು. ಅದರಲ್ಲಿ ಕೇವಲ 32 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇನ್ನೂ 78 ಕೋಟಿ ರೂ. ಬಾಕಿ ಇದೆ. ಈ ಅನುದಾನ ಬಿಡುಗಡೆ ಮಾಡುವಂತೆ ಆರು ಬಾರಿ ಮನವಿ ಸಲ್ಲಿಸಲಾಗಿದೆ. ಅನುದಾನ ಇಲ್ಲದೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ರಸ್ತೆಗಳು ಹದಗೆಟ್ಟಿವೆ, ಶಿಥಿಲಾವಸ್ಥೆಯ ಕಟ್ಟಡಗಳನ್ನು ತೆರವುಗೊಳಿಸಬೇಕಾಗಿದೆ. ಟೆಂಡರ್ ಕರೆದ ಕಾಮಗಾರಿಗಳಿಗೆ ಹಣ ಇಲ್ಲ. ಹೊಸದಾಗಿ ಟೆಂಡರ್ ಕರೆಯುವುದಕ್ಕೂ ಅನುದಾನದ ಕೊರತೆ ಇದೆ. ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯವಾಗಿ ಹೈಕೋರ್ಟ್ ಮೆಟ್ಟಿಲೇರಿಬೇಕಾಗಿದೆ ಎಂದರು.
ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ಪರ ವಕೀಲರು ಅನುದಾನ ಬಿಡುಗಡೆ ಆಗದಿರುವುದಕ್ಕೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡು ಕ್ಷೇತ್ರದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದಾರೆ. ಆದರೆ, ಯೋಜನೆಗಳನ್ನು ರೂಪಿಸುವುದು, ಅದಕ್ಕೆ ಅನುಮೋದನೆ ನೀಡುವುದು, ಅಗತ್ಯ ಅನುದಾನ ಬಿಡುಗಡೆ ಮಾಡುವುದು, ಸಂದರ್ಭಾನುಸಾರ ಯೋಜನೆ, ಅನುದಾನ ರದ್ದುಪಡಿಸುವುದು, ತಡೆ ಹಿಡಿಯುವುದು, ಮಾರ್ಪಾಡು ಮಾಡುವುದು ಚುನಾಯಿತ ಸರ್ಕಾರದ ವಿವೇಚನಾಧಿಕಾರವಾಗಿರುತ್ತದೆ. ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಪ್ರಶ್ನಿಸುವುದು ಸೂಕ್ತವಲ್ಲ. ಮೇಲಾಗಿ ಅರ್ಜಿದಾರರು ಸ್ವತಃ ಶಾಸಕರಾಗಿದ್ದು, ಶಾಸನ ಸಭೆಯಲ್ಲಿ ಈ ವಿಷಯ ಎತ್ತಬಹುದು ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.