ಬೆಂಗಳೂರು : ತೃತೀಯ ಲಿಂಗಿಯೊಬ್ಬರಿಗೆ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್‌ಎಲ್‌ಎಸ್‌ಐಯು) ಕಾನೂನು ಅಧ್ಯಯನ ಮಾಡಲು ಹಣಕಾಸಿನ ಸಮಸ್ಯೆ ಎದುರಾಗಿರುವ ಸಂಬಂಧ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ರಾಜ್ಯ ತೃತೀಯ ಲಿಂಗಿಗಳ ನೀತಿ- 2017ನ್ನು ಹೇಗೆ ಜಾರಿ ಮಾಡಲಾಗುತ್ತಿದೆ ಎಂಬುದರ ಕುರಿತು ವಿವರವಾದ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಎನ್‌ಎಲ್‌ಎಸ್‌ಐಯು ಪ್ರವೇಶ ನಿರಾಕರಿಸಿದ್ದಕ್ಕೆ ಆಕ್ಷೇಪಿಸಿ ಮತ್ತು ರಾಜ್ಯ ತೃತೀಯ ಲಿಂಗಿ ನೀತಿ ಜಾರಿಗೆ ಕೋರಿ ತೃತೀಯ ಲಿಂಗಿ ಮುಗಿಲ್ ಅನ್ಬು ವಸಂತ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.
ರಾಜ್ಯ ಸರ್ಕಾರವು ತೃತೀಯ ಲಿಂಗಿ ನೀತಿಯನ್ನು ಹೇಗೆ ಜಾರಿ ಮಾಡುತ್ತಿದೆ. ನೀತಿಯ ಭಾಗವಾಗಿ ತೃತೀಯ ಲಿಂಗಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತಿದೆಯೇ, ಒಂದು ವೇಳೆ ನೀಡಿದರೆ ಎಷ್ಟು ನೆರವು ನೀಡಲಾಗುತ್ತಿದೆ. ಅದನ್ನು ಪಡೆಯುವುದು ಹೇಗೆ ಎಂಬುದು ಸೇರಿದಂತೆ ಅಗತ್ಯ ವಿಚಾರಗಳನ್ನು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿ ಸಲ್ಲಿಸಲು ಕೋರ್ಟ್ ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ: ಶುಲ್ಕ ಪಾವತಿಸಲಾಗದ ಅರ್ಜಿದಾರರು, ಸರ್ಕಾರವು ಕರ್ನಾಟಕ ರಾಜ್ಯ ತೃತೀಯ ಲಿಂಗಿಗಳ ನೀತಿ ಜಾರಿಗೊಳಿಸಲಾಗಿಲ್ಲ. ನೀತಿಯಲ್ಲಿ ಹಣಕಾಸಿನ ನೆರವಿನ ವಿಚಾರ ಇತ್ಯಾದಿ ಸೇರಿದೆ. ಈ ಸಂಬಂಧ ಹಣಕಾಸಿನ ನೆರವು ಇತ್ಯಾದಿ ಕೋರಲು ಅರ್ಜಿಯಲ್ಲಿ ತಿದ್ದುಪಡಿ ಮಾಡುವ ಸಂಬಂಧ ಮನವಿ ಸಲ್ಲಿಕೆ ಮಾಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, 2023ರ ಆಗಸ್ಟ್ 22ರಂದು ಎನ್‌ಎಲ್‌ಎಸ್‌ಯುಐ ಪ್ರವೇಶ ಕಲ್ಪಿಸಬೇಕು ಎಂದು ಮಧ್ಯಂತರ ಆದೇಶ ನೀಡಿತ್ತು. ಆದರೆ, ಆರ್ಥಿಕ ಸ್ಥಿತಿಯಿಂದಾಗಿ ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್ಗೆ ಅವರಿಗೆ ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ. ಈ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅಗತ್ಯ ಹಣಕಾಸಿನ ನೆರವು ಕಲ್ಪಿಸದೇ ಪ್ರವೇಶಾತಿಗೆ ಮೀಸಲಾತಿ ನಿಗದಿಪಡಿಸುವುದು ಅಥವಾ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅಥವಾ ಹಾಲಿ ಪ್ರಕರಣದಲ್ಲಿ ಅರ್ಜಿದಾರರಿಗೆ ಪ್ರವೇಶಾತಿ ಕಲ್ಪಿಸುವಂತೆ ಮಧ್ಯಂತರ ಆದೇಶ ಮಾಡುವುದರಿಂದ ತೃತೀಯ ಲಿಂಗಿಗಳು ಎದುರಿಸುವ ಸಮಸ್ಯೆಗೆ ಸ್ಪಂದಿಸಿದಂತಾಗದು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಎನ್‌ಎಲ್‌ಎಸ್‌ಐಯು ಪರ ವಕೀಲರು, ಲಭ್ಯವಿರುವ ಕಾನೂನು ಚೌಕಟ್ಟಿನಲ್ಲಿ ಅರ್ಜಿದಾರರಿಗೆ ಎಲ್ಲ ಅಗತ್ಯ ನೆರವು ಕಲ್ಪಿಸಲಾಗಿದೆ. ಇದಕ್ಕೆ ಅರ್ಜಿದಾರರು ಯಾವುದೇ ಆಕ್ಷೇಪ ಎತ್ತಿಲ್ಲ. ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್ ಬೋಧನೆ ಆರಂಭವಾಗಿದೆ. ಈಗ ಅರ್ಜಿದಾರರು ಶುಲ್ಕ ಪಾವತಿಸಿದರೂ ಬಾಕಿ ಉಳಿದಿರುವ ಅವಧಿಯು ವಿಶ್ವವಿದ್ಯಾಲಯದ ನಿಯಮಗಳ ಅನ್ವಯ ಅಗತ್ಯ ಹಾಜರಾತಿ ಪಡೆಯಲು ಸಾಧ್ಯವಾಗದು. ಹೀಗಾಗಿ, ನ್ಯಾಯಾಲಯ ಕಲ್ಪಿಸಿರುವ ಪರಿಹಾರವು ಅನೂರ್ಜಿತವಾಗಲಿದೆ ಎಂದರು.
ವಾದ ಆಲಿಸಿದ ನ್ಯಾಯಪೀಠ, ತೃತೀಯ ಲಿಂಗಿಗಳ ನೀತಿ ಜಾರಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಸೂಚಿಸಿ, ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ: 2023-24ನೇ ಸಾಲಿನ ಗಂಗಾ ಗಲ್ಯಾಣ ಯೋಜನೆಗೆ ಕರೆದಿದ್ದ ಟೆಂಡರ್ ರದ್ದುಪಡಿಸಿದ ಹೈಕೋರ್ಟ್