ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಹರಿಯುವ ವೃಷಭಾವತಿ ನದಿ ಮತ್ತದರ ಉಪ ನದಿಗಳ ಪ್ರದೇಶಗಳು ವಿವಿಧ ಭಾಗಗಳಲ್ಲಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸುವ ಕುರಿತಂತೆ ಜಂಟಿ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಬಿಬಿಎಂಪಿ ಹಾಗೂ ನಗರ ಜಿಲ್ಲಾಡಳಿತಕ್ಕೆ ಮಂಗಳವಾರ ಹೈಕೋರ್ಟ್ ನಿರ್ದೇಶನ ನೀಡಿತು.
ಮಲಿನಗೊಂಡಿರುವ ನದಿ ಸಂರಕ್ಷಣೆ ಹಾಗೂ ಒತ್ತುವರಿ ತೆರವುಗೊಳಿಸಲು ಸೂಚನೆ ನೀಡುವಂತೆ ಕೋರಿ ನಗರದ ವಕೀಲೆ ಗೀತಾ ಮಿಶ್ರಾ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠದ ನಡೆಸಿತು.
ವಿಚಾರಣೆಯಲ್ಲಿ ಬಿಬಿಎಂಪಿ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿ, ವೃಷಭಾವತಿ ನದಿ ವ್ಯಾಪ್ತಿಯಲ್ಲಿ 17 ಎಕರೆ 25 ಗುಂಟೆ ಉಪ ನದಿಗಳ ನಾಲೆ ಒತ್ತುವರಿಯಾಗಿದೆ. ಇದಲ್ಲದೆ, ನದಿ ಕಣಿವೆಯಲ್ಲಿ 10 ಎಕರೆ 25 ಗುಂಟೆ ಒತ್ತುವರಿಯಾಗಿದ್ದು, ಇದರಲ್ಲಿ 7 ಎಕರೆ 28 ಗುಂಟೆ ಬಿಬಿಎಂಪಿ ವ್ಯಾಪ್ತಿಗೆ ಒಳಪಡುತ್ತದೆ. ನದಿ ವ್ಯಾಪ್ತಿಗೆ ಬರುವ ಕೆರೆಗಳಲ್ಲಿ 52 ಎಕರೆ 21 ಗುಂಟೆ ಒತ್ತುವರಿಯಾಗಿದ್ದು, 48 ಎಕರೆ 31 ಗುಂಟೆ ಪ್ರದೇಶ ಬಿಬಿಎಂಪಿ ವ್ಯಾಪ್ತಿಗೆ ಬರುತ್ತದೆ. ಒತ್ತುವರಿ ತೆರವಿಗೆ ಬಿಬಿಎಂಪಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ನಗರ ಜಿಲ್ಲಾಡಳಿತದ ವ್ಯಾಪ್ತಿಗೆ ಬರುವ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಗರ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಬಿಬಿಎಂಪಿಯಿಂದ ಜಿಲ್ಲಾಡಳಿತಕ್ಕೆ ಪತ್ರ ಹೋಗಿರುವ ವಿಚಾರವಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಾಹಿತಿ ಪಡೆದುಕೊಳ್ಳಲು ಸಮಯಾವಕಾಶ ನೀಡಬೇಕು ಎಂದು ಕೋರಿದರು.
ಇದಕ್ಕೆ ಸಮ್ಮತಿಸಿದ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆ ವೃಷಭಾವತಿ ನದಿಯ ಒತ್ತುವರಿ ತೆರವುಗೊಳಿಸುವ ಸಂಬಂಧ ಜಂಟಿ ಕ್ರಿಯಾ ಯೋಜನೆಯೊಂದಿಗೆ ಬರಬೇಕು ಎಂದು ಬಿಬಿಎಂಪಿ ಹಾಗೂ ನಗರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ದೆಹಲಿ: IAS ಕೋಚಿಂಗ್ ಕೇಂದ್ರದ ನೆಲಮಾಳಿಗೆಗೆ ನುಗ್ಗಿದ ನೀರು; ಮೂವರು ವಿದ್ಯಾರ್ಥಿಗಳು ಸಾವು - Coaching Centre Flooded