ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದ್ದು, ತ್ಯಾಗದಬಾಗಿ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಹಳ್ಳ ಉಕ್ಕಿ ಹರಿದಿದ್ದರಿಂದ ಹಿಟಾಚಿ ಮುಳುಗಿದೆ. ಗ್ರಾಮದಲ್ಲಿ ಸೇತುವೆ ಇಕ್ಕೆಲಗಳನ್ನು ಕ್ಲೀನ್ ಮಾಡುವಾಗ ಈ ಘಟನೆ ನಡೆದಿದೆ.
ಕೆಮ್ಮಣ್ಣುಗುಂಡಿ - ಕಲ್ಲತ್ತಿಗರಿ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ಹಳ್ಳದಲ್ಲಿ ನೀರು ಹೆಚ್ಚಾಗಿ ಹಿಟಾಚಿ ಮುಳುಗಿದೆ. ಹಿಟಾಚಿ ಬಿಟ್ಟು ಮೇಲೆ ಬಂದು ಕಾರ್ಮಿಕರು ಜೀವ ಉಳಿಸಿಕೊಂಡಿದ್ದಾರೆ. ಹಲವು ಮಂದಿ ಕಾರ್ಮಿಕರಿದ್ದರು ಹಿಟಾಚಿಯನ್ನು ಹಳ್ಳದಿಂದ ಹೊರ ತೆಗೆಯಲು ಸಾಧ್ಯವಾಗಿಲ್ಲ. ಮಳೆ ಕಡಿಮೆ ಆಗುವವರೆಗೂ ಹಳ್ಳದಲ್ಲೇ ಹಿಟಾಚಿ ಲಾಕ್ ಆಗಲಿದೆ.
ಮೈದುಂಬಿ ಹರಿಯುತ್ತಿರುವ ಕಲ್ಲತ್ತಿಗಿರಿ ಜಲಪಾತ: ಮತ್ತೊಂಡೆ, ಭಾರೀ ಮಳೆಯಿಂದಾಗಿ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಕಲ್ಲತ್ತಿಗಿರಿ ಜಲಪಾತ ಮೈದುಂಬಿ ಹರಿಯುತ್ತಿದೆ. ಮೊನ್ನೆವರೆಗೂ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆ ಇತ್ತು. ರಾತ್ರಿ ಸುರಿದ ಒಂದೇ ಮಳೆಗೆ ಕಲ್ಲತ್ತಿಗಿರಿ ಜಲಪಾತ ಧುಮ್ಮಿಕ್ಕುತ್ತಿದೆ. ಕೆಮ್ಮಣ್ಣುಗುಂಡಿ ಗುಡ್ಡಗಾಡು ತಪ್ಪಲ್ಲಿನಲ್ಲಿ ಭಾರೀ ಮಳೆಯಾಗುತ್ತಿದೆ. ಜಲಪಾತವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 24 ಗಂಟೆ ಮಳೆ ಮುನ್ಸೂಚನೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ - Karnataka Rain Forecast
ಮಳೆ ಅಬ್ಬರಕ್ಕೆ 20ಕ್ಕೂ ಹೆಚ್ಚು ಮನೆಗಳು ಜಲಾವೃತ(ಮೈಸೂರು): ಮತ್ತೊಂದೆಡೆ, ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನಂಜನಗೂಡು ನಗರದ ಅಶೋಕಪುರಂ ಬಡಾವಣೆಯ 27ನೇ ವಾರ್ಡ್ನಲ್ಲಿರುವ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಚರಂಡಿಯ ಕೊಳಚೆ ನೀರು ನುಗ್ಗಿದೆ. ಮಳೆ ಸೃಷ್ಟಿಸಿದ ಅವಾಂತರಕ್ಕೆ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು.
ಬಡಾವಣೆಯಲ್ಲಿ ಚರಂಡಿಯ ವ್ಯವಸ್ಥೆ ಸರಿಯಿಲ್ಲದ ಕಾರಣ ಮಳೆಯ ನೀರೆಲ್ಲ ಮನೆಗಳಿಗೆ ನುಗ್ಗುತ್ತಿದ್ದು, ಇದರಿಂದ ನಿವಾಸಿಗಳು ತುಂಬಾ ಪರದಾಡುವಂತಾಗಿದೆ. ಭಾರಿ ಮಳೆಯಾದರೆ, ಮನೆಗಳು ಸಂಪೂರ್ಣವಾಗಿ ಜಲಾವೃತವಾಗುತ್ತವೆ. ನಮಗೆ ವಾಸಿಸಲು ಸಾಧ್ಯವಾಗುತ್ತಿಲ್ಲ. ದವಸ ಧಾನ್ಯಗಳು ನಾಶವಾಗಿ ಹೋಗಿವೆ. ನಮಗೆ ಊಟಕ್ಕೂ ಗತಿಯಿಲ್ಲದಂತಾಗಿದೆ. ನಗರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರು ಯಾರೊಬ್ಬರೂ ಕೂಡ ಚರಂಡಿ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.