ಬೆಂಗಳೂರು: ಕೆರೆಗಳ ನಡುವೆ ಸಂಪರ್ಕ, ರಾಜಕಾಲುವೆ ಪಕ್ಕ 50 ಅಡಿ ಅಂತರದಲ್ಲಿ ಕಟ್ಟಡ ನಿರ್ಮಾಣಕ್ಕೆ ತಡೆ, ರಾಜಕಾಲುವೆ ಪಕ್ಕದಲ್ಲಿ 300 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾರ್ಯ, ಚರಂಡಿಗಳ ಹೂಳೆತ್ತುವುದು, ಅನಧಿಕೃತ ಕಟ್ಟಗಳ ಸಮೀಕ್ಷೆ ಹಾಗೂ ತೆರವು, ಕಾನೂನು ತಿದ್ದುಪಡಿ ಅಥವಾ ಸುಗ್ರೀವಾಜ್ಞೆ ಮೂಲಕ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಅತಿವೃಷ್ಟಿ ವಿಪತ್ತು ನಿರ್ವಹಣೆ ಹಾಗೂ ಇತರ ವಿಷಯಗಳ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಗುರುವಾರ ಬಿಬಿಎಂಪಿ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದರು. ನಂತರ ಮಾಧ್ಯಮಗೋಷ್ಠಿ ನಡೆಸಿ, ನಿರ್ಣಯಗಳು ಹಾಗೂ ಅಧಿಕಾರಿಗಳಿಗೆ ನೀಡಿರುವ ಸೂಚನೆಗಳ ಬಗ್ಗೆ ಮಾಹಿತಿ ನೀಡಿದರು.
ಎಲ್ಲ ಕೆರೆಗಳ ನಡುವೆ ಸಂಪರ್ಕ ಏರ್ಪಡಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಸೂಚಿಸಲಾಗಿದೆ. ಬರಗಾಲದಲ್ಲಿ ಕೆರೆಗಳು ಬತ್ತಿ ಹೋಗಿದ್ದವು. ಕೆರೆಗಳು ತುಂಬಬೇಕು, ಅಂತರ್ಜಲ ಪುನಶ್ಚೇತನಗೊಳ್ಳಬೇಕು. ಹೀಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕೆರೆಗಳಿಗೆ ಕೊಳಚೆ ನೀರನ್ನು ಹರಿಸಬಾರದು. ಕೇವಲ ಮಳೆ ನೀರು ಹೋಗುವಂತೆ ನೋಡಿಕೊಳ್ಳಬೇಕು. ಹೀಗಾಗಿ ಕೆರೆಗಳ ನಡುವೆ ಸಂಪರ್ಕ ಸಾಧಿಸಲು ಯೋಜನೆ ರೂಪಿಸಲು ಸೂಚಿಸಿದ್ದೇನೆ ಎಂದು ಹೇಳಿದರು.
ರಾಜಕಾಲುವೆಗಳ ಒತ್ತುವರಿ ತೆರವಿಗೆ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಪ್ರವಾಹದ ನೀರು ಕೆರೆಗೆ ಹೋಗುವುದು ಹಾಗೂ ಕೆರೆಯಿಂದ ಕೋಡಿ ಬೀಳುವ ನೀರು ಸರಾಗವಾಗಿ ಹೋಗಲು ಅನುವಾಗುವಂತೆ ಗೇಟ್ ಅಳವಡಿಸಲು ಸೂಚಿಸಿದ್ದೇನೆ. ಇದಕ್ಕೆ ಬೇಕಾಗಿರುವ ಮೂಲಸೌಕರ್ಯ ತಯಾರಿ ಮಾಡಿಕೊಳ್ಳಲು ಬಿಡಿಎ, ಬಿಬಿಎಂಪಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದವರಿಗೆ ಸೂಚಿಸಿದ್ದೇನೆ ಎಂದರು.
ರಾಜಕಾಲುವೆ ಅಕ್ಕಪಕ್ಕದಲ್ಲಿ 50 ಅಡಿಗಳಷ್ಟು ಅಂತರದಲ್ಲಿ ಯಾರೂ ಕಟ್ಟಡ ಕಟ್ಟುವಂತಿಲ್ಲ. ಇಂತಹ ಜಾಗವನ್ನು ಗುರುತಿಸಿದ್ದು, ಇಲ್ಲಿ 300 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಮಾಡಲಾಗುವುದು. ಇದರಿಂದ ಒತ್ತುವರಿ ನಿಲ್ಲುತ್ತದೆ ಹಾಗೂ ಮಳೆನೀರು ಹರಿಯಲು ನೆರವಾಗುತ್ತದೆ. ಯೋಜನೆಯ ಆರಂಭಿಕ ಹಂತಕ್ಕೆ ಹಣ ಮೀಸಲಿಡಲಾಗಿದೆ. ಅಲ್ಲಿನ ಭೂಮಾಲೀಕರಿಗೆ ಟಿಡಿಆರ್ ಮೂಲಕ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ನಿಲ್ಲದ ಮಳೆ ಆರ್ಭಟ: ಫ್ಲೈಓವರ್ ಕೆಳಭಾಗ ಸಂಪೂರ್ಣ ಜಲಾವೃತ, ಜನರ ಪರದಾಟ