ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನವಾಗಿದ್ದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಕಳೆದ 6 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರೇವಣ್ಣಗೆ ಕೊನೆಗೂ ರಿಲೀಫ್ ಸಿಕ್ಕಂತಾಗಿದೆ.
ರೇವಣ್ಣ ಜೈಲಿನಿಂದ ಹೊರ ಬರುತ್ತಿದ್ದಂತೆ ಅವರ ಕಾರಿಗೆ ಎದುರಾದ ಅಭಿಮಾನಿಗಳು ಜೈಕಾರ ಕೂಗಿದರು. ಈ ವೇಳೆ ನೂಕುನುಗ್ಗಲು ಉಂಟಾಗಿದ್ದರಿಂದ ಪೊಲೀಸರು ಈ ಗುಂಪನ್ನು ಚದುರಿಸಲು ಹರಸಾಹಸಪಟ್ಟರು.
ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದಡಿ ಹೆಚ್.ಡಿ ರೇವಣ್ಣ ಅವರನ್ನು ಇದೇ ತಿಂಗಳು 4 ರಂದು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು.
ಸೋಮವಾರ (ಮೇ 13) ಹೆಚ್.ಡಿ. ರೇವಣ್ಣ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಇಬ್ಬರ ಶ್ಯೂರಿಟಿ, ಐದು ಲಕ್ಷ ರೂಪಾಯಿ ಬಾಂಡ್ ನೀಡಬೇಕು, ಸಾಕ್ಷ್ಯಾಧಾರ ನಾಶಪಡಿಸಬಾರದು ಹಾಗೂ ಎಸ್ಐಟಿ ತನಿಖೆಗೆ ಸಹಕರಿಸಬೇಕು. ಜೊತೆಗೆ, ಕೆ.ಆರ್. ನಗರಕ್ಕೆ ಹೋಗಬಾರದು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತ್ತು.
ಇದನ್ನೂ ಓದಿ: ಅಪಹರಣ ಪ್ರಕರಣದಲ್ಲಿ ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್: ಜಾಮೀನು ನೀಡಿದ ನ್ಯಾಯಾಲಯ - H D Revanna Gets Bail