ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರಿಗೆ ವಿಚಾರಣಾಧೀನ ನ್ಯಾಯಾಲಯ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸಬೇಕೆಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿತು.
ವಿಚಾರಣೆಯಲ್ಲಿ ರೇವಣ್ಣ ಪರ ವಕೀಲ, ಅರ್ಜಿಯ ಸಂಬಂಧ ಆಕ್ಷೇಪಣೆ ಸಲ್ಲಿಸಿರುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲ, ಆಕ್ಷೇಪಣೆ ಪ್ರತಿ ಈಗಷ್ಟೇ ಸಿಕ್ಕಿದೆ. ಅಧ್ಯಯನ ಮಾಡಬೇಕಾಗಿದೆ ಎಂದರು. ಈ ಅಂಶವನ್ನು ಪರಿಗಣಿಸಿದ ಕೋರ್ಟ್, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
ರೇವಣ್ಣ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸಿ.ವಿ.ನಾಗೇಶ್, "ಪ್ರಕರಣದಲ್ಲಿ ಮಾಹಿತಿದಾರರಾದ ಎರಡನೇ ಪ್ರತಿವಾದಿಗೆ ಪೊಲೀಸರು ಏಕೆ ನೋಟಿಸ್ ನೀಡಿಲ್ಲ ಎಂಬ ಅಂಶವನ್ನು ತಿಳಿಯಬೇಕಿದೆ. ಇದಕ್ಕೆ ರಾಜ್ಯ ಸರ್ಕಾರ ಉತ್ತರಿಸಬೇಕು. ಬೆಂಗಳೂರು ಪೊಲೀಸ್ ಕಮಿಷನರ್ ಅವರಿಂದ ವಿವರಣೆ ಕೇಳಬೇಕು" ಎಂದರು.
ಎಸ್ಐಟಿ ಅಧಿಕಾರಿಗಳು ಮಾಹಿತಿದಾರೆಗೆ ನೋಟಿಸ್ ಜಾರಿಯಾಗುವಂತೆ ನೋಡಿಕೊಳ್ಳುವುದನ್ನು ಖಾತರಿಪಡಿಸಬೇಕು ಎಂದು ಹೇಳಿದ ಪೀಠ ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ಅಪಹರಣ ಸಂಬಂಧ ಆಕೆಯ ಪುತ್ರ ನೀಡಿದ ದೂರು ಆಧರಿಸಿ ಮೈಸೂರಿನ ಕೆ.ಆರ್.ನಗರ ಠಾಣೆಯಲ್ಲಿ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ. ಇದರಲ್ಲಿ ಸತೀಶ್ ಬಾಬಣ್ಣ ಎರಡನೇ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ರೇವಣ್ಣ ಅವರಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.
ಇದನ್ನೂ ಓದಿ: ಹೆಚ್ ಡಿ ರೇವಣ್ಣ ಜಾಮೀನು ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ಎಸ್ಐಟಿ - HD Revanna Bail cancel plea