ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಅವರ ಆರೋಗ್ಯದ ಬಗ್ಗೆ ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇವೇಗೌಡರ ಆರೋಗ್ಯದ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ಬಂದು ದೇವೇಗೌಡರು ಪ್ರಚಾರ ಮಾಡುತ್ತಾರೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ಕೊಟ್ಟ ಹೇಳಿಕೆಯನ್ನೇ ಮಾಜಿ ಸಂಸದ ಡಿ.ಕೆ. ಸುರೇಶ್ ನೀಡಿದ್ದಾರೆ. ಹಿಂದೆ ಅಶ್ವತ್ಥ್ ಪರ ದೇವೇಗೌಡರು ಹಳ್ಳಿ ಹಳ್ಳಿಗೆ ಬಂದು ಪ್ರಚಾರ ನಡೆಸಿರಲಿಲ್ವಾ, ಆಗ ವ್ಯಾಮೋಹಕ್ಕೆ ಬಿದ್ದು ದೇವೇಗೌಡರು ಪ್ರಚಾರಕ್ಕೆ ಬಂದಿದ್ದರಾ ಎಂದು ಪ್ರಶ್ನಿಸಿದರು.
ಅಂದು ದೇವೇಗೌಡರು ಯಾವುದಕ್ಕೋಸ್ಕರ ಹೋಗಿದ್ದರು: ದೇವೇಗೌಡರು ಬರುತ್ತಿರುವುದು ಮೊಮ್ಮಗನ ಪಟ್ಟಾಭಿಷೇಕಕ್ಕೆ ಎನ್ನುತ್ತಿದ್ದಾರೆ. ಅಶ್ವತ್ಥ್ ಗೆಲ್ಲಿಸಲು ಅವತ್ತು ದೇವೇಗೌಡರು ಹೋಗಿರಲಿಲ್ಲವೇ, ಅವತ್ತು ಯಾರಿಗೋಸ್ಕರ ದೇವೇಗೌಡರು ಹೋಗಿದ್ದರು, ಇದೀಗ ಈ ರೀತಿಯ ಸಣ್ಣತನದ ಹೇಳಿಕೆ ನೀಡುತ್ತಿರುವ ಅವರ ಮಾತಿಗೆ ಕಾಲವೇ ಉತ್ತರ ಕೊಡಲಿದೆ ಎಂದು ಎಚ್ಚರಿಸಿದರು.
ಚನ್ನಪಟ್ಟಣ ಚುನಾವಣೆಯಲ್ಲಿ ಯಾರು ಯಾರು ಏನು ಹೇಳಿಕೆ ಕೊಡುತ್ತಿದ್ದಾರೆ ಎಂಬುದು ಗೊತ್ತಿದೆ. ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತದೆ. ನಿನ್ನೆ ದಿನ ಅವರು ಆಡಿದ ಮಾತುಗಳು, ಅದರಲ್ಲೂ ಈ ಹಿಂದೆ ನನ್ನ ಜೊತೆ ಇದ್ದವರ ಈ ಹೇಳಿಕೆಗಳು ನನ್ನ ಕೆರಳಿಸುತ್ತಿದೆ. ಚನ್ನಪಟ್ಟಣ ನನ್ನ ಅಭಿವೃದ್ಧಿ ಕೆಲಸ ಮಾಡಿಲ್ಲ ಅಂತ ಹೇಳ್ತಾರೆ ಅಲ್ಲವೇ ಅದನ್ನು ಜನವೇ ತೀರ್ಮಾನ ಮಾಡುತ್ತಾರೆ ಎಂದು ಮಾರ್ಮಿಕವಾಗಿ ತಿಳಿಸಿದರು.
ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಪ್ರಚಾರ: ನಿಖಿಲ್ ಕುಮಾರಸ್ವಾಮಿ ಪರ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಇಂದು ಚನ್ನಪಟ್ಟಣದಲ್ಲಿ ಪ್ರಚಾರಕ್ಕೆ ಆಗಮಿಸುತ್ತಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಯದುವೀರ್ ಅವರು ತಾವಾಗಿಯೇ ಸಮಯ ಮಾಡಿಕೊಂಡು ಚನ್ನಪಟ್ಟಣಕ್ಕೆ ಬರುತ್ತಿದ್ದಾರೆ. ಅವರಿಗೆ ರಾಮನಗರ ಜಿಲ್ಲೆಯಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರೊಂದಿಗೆ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಮುಂದಿನ ನಾಲ್ಕು ದಿನ ಅವರು ಪ್ರಚಾರ ಮಾಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಮುಡಾ ಅಕ್ರಮ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ RTI ಕಾರ್ಯಕರ್ತ ಗಂಗರಾಜು