ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಪ್ರಮುಖ ಆರೋಪಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಜೂನ್ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಇಂದು ಆದೇಶಿಸಿದೆ.
ಪೊಲೀಸ್ ವಶಕ್ಕೆ ಪಡೆದಿದ್ದ ಅವಧಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಎಸ್‌ಐಟಿ ಅಧಿಕಾರಿಗಳು ಕೋರ್ಟಿಗೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಜ್ವಲ್ ರೇವಣ್ಣಗೆ 14 ದಿನಗಳ ಕಾಲ ಅಂದರೆ ಜೂನ್ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದರು. ಎಸ್‌ಐಟಿ ಅಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣನನ್ನು ಬಸವನಗುಡಿ ನಿವಾಸಕ್ಕೆ ಮಹಜರಿಗೆ ಕರೆದೊಯ್ದ ಎಸ್ಐಟಿ - Hassan sexual abuse case
ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಬೆನ್ನಲ್ಲೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ತೆರಳಿದ್ದರು. ಬಳಿಕ ಎಸ್ಐಟಿ ರಚಿಸಿ ತನಿಖೆಗೆ ಸರ್ಕಾರ ಆದೇಶಿಸಿತ್ತು. ಈ ಮಧ್ಯೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ಮತ್ತು ಹೆಚ್ ಡಿ ರೇವಣ್ಣ ಅವರ ವಿರುದ್ಧ ದೂರು ದಾಖಲಾಗಿತ್ತು. ಆ ನಂತರ ಸಿಐಡಿ ಠಾಣೆಗಳಲ್ಲೂ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಗಳು ದಾಖಲಾಗಿವೆ. ಈ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ.