ವಿಜಯಪುರ: ನಗರದ ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗುವಿನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಶನಿವಾರ ಬೆಳಗ್ಗೆ 11:30 ಸುಮಾರಿಗೆ ವಾರ್ಡ್ ನಂಬರ್ 123ರಿಂದ ಮಗುವನ್ನು ಎತ್ತೊಯ್ದಿದ್ದ ವ್ಯಕ್ತಿ, ಇಂದು ಮಧ್ಯಾಹ್ನ ಜಿಲ್ಲಾಸ್ಪತ್ರೆಗೆ ಬಂದು ಮಗುವನ್ನು ಒಪ್ಪಿಸಿದ್ದಾನೆ. ಪ್ರಕರಣ ಸಂಬಂಧ ದೇವರಹಿಪ್ಪರಗಿ ತಾಲೂಕಿನ ಚಟ್ನಳ್ಳಿ ಗ್ರಾಮದ ರವಿ ಹರಿಜನ ಎಂಬುವವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಗುವನ್ನು ಆಟವಾಡಿಸಲು ಎತ್ತುಕೊಂಡಿದ್ದಾಗ ಫೋನ್ ಕೆರೆ ಬಂದಿದ್ದರಿಂದ ಮಾತನಾಡುತ್ತಾ ಹಾಗೇ ಮಗುವನ್ನು ಕರೆದುಕೊಂಡು ಹೋಗಿರುವುದಾಗಿ ಆರೋಪಿ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಪೊಲೀಸರು ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಮಗು ಮತ್ತೆ ತನ್ನ ಮಡಿಲು ಸೇರಿದಕ್ಕೆ ತಾಯಿ ರಾಮೇಶ್ವರಿ ಸಾಳುಂಕೆ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಗುವಿನ ಅಪಹರಣ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಪಿ ಮಾಹಿತಿ: ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದು, ''ಮಹಿಳೆ ದಾಖಲಾಗಿದ್ದ ವಾರ್ಡ್ನಲ್ಲೇ ರವಿ ಹರಿಜನ್ ಅನಧಿಕೃತವಾಗಿ ತಂಗಿದ್ದ. ದೇವರಹಿಪ್ಪರಗಿ ತಾಲೂಕಿನ ಚಟ್ನಳ್ಳಿ ಗ್ರಾಮದ ರವಿ ಹರಿಜನ ಯಾಕೆ ಮಗುವನ್ನು ಕರೆದುಕೊಂಡು ಹೋದ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ. ನಿನ್ನೆ ಮದ್ಯಾಹ್ನದ ವೇಳೆ ಮಗುವನ್ನು ಜಿಲ್ಲಾಸ್ಪತ್ರೆಯಿಂದ ಕರೆದುಕೊಂಡು ಹೋಗಿದ್ದ. ಘಟನೆಗೆ ನಿಖರ ಕಾರಣ ಏನೆಂಬುದು ಗೊತ್ತಾಗಿಲ್ಲ. ಮಗುವನ್ನು ಕರೆದುಕೊಂಡು ರವಿ ಕಲಬುರಗಿಗೂ ಹೋಗಿ ಬಂದಿರುವುದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಸದ್ಯ ಮಗು ತಾಯಿಯ ಬಳಿ ಇದೆ, ತಾಯಿ ಹಾಗೂ ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ: 7 ತಿಂಗಳಲ್ಲಿ 135 ನವಜಾತ ಶಿಶು, 28 ತಾಯಂದಿರ ಸಾವು; ಕಾರಣವೇನು?