ಬೆಂಗಳೂರು : ಗಂಗೇನಹಳ್ಳಿಯ ಬಡಾವಣೆಯ ಜಮೀನು ಅಕ್ರಮ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು, ಇದೀಗ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದರು. ಹೀಗಾಗಿ ವಿಚಾರಣೆಗೆ ಲೋಕಾ ಮುಂದೆ ಹೆಚ್ಡಿಕೆ ಹಾಜರಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಆರೋಪ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ವಿರುದ್ಧ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮಠದಹಳ್ಳಿಯ ಗಂಗೇನಹಳ್ಳಿ ಬಡಾವಣೆಯಲ್ಲಿನ ಜಮೀನನ್ನ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿರುವುದಾಗಿ ಆರೋಪಿಸಿದ್ದರು. ಇದಕ್ಕೂ ಮುನ್ನ 9 ವರ್ಷಗಳ ಹಿಂದೆ ದಾಖಲಾಗಿದ್ದರೂ ತನಿಖೆ ಮಂದಗತಿಯಲ್ಲಿದ್ದ ಪ್ರಕರಣವನ್ನ ಲೋಕಾಯುಕ್ತ ಪೊಲೀಸರು ಚುರುಕುಗೊಳಿಸಿದ್ದರು.
ಗಂಗೇನಹಳ್ಳಿಯ ಬಡಾವಣೆಯ 7/1ಬಿ, ಸಿ ಹಾಗೂ ಡಿ ಸರ್ವೆ ನಂಬರ್ನಲ್ಲಿ 1.11 ಎಕರೆ ಜಮೀನು ಬಿಡಿಎಗೆ ಭೂಸ್ವಾದೀನಗೊಂಡಿದ್ದು, ಇದನ್ನು ಡಿನೋಟಿಫೈ ಮಾಡಿರುವ ಸಂಬಂಧ ಕಳೆದ 9 ವರ್ಷಗಳ ಹಿಂದೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ವಿಳಂಬ ತನಿಖೆಗೆ ಸಚಿವ ಕೃಷ್ಣಬೈರೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಮೂಲೆಗುಂಪಾಗಿದ್ದ ಪ್ರಕರಣದ ಕಡತವನ್ನ ಕೈಗೆತ್ತಿಕೊಂಡಿರುವ ಪೊಲೀಸರು ನೋಟಿಸ್ ನೀಡಿದ ಮೇರೆಗೆ ಬಿ. ಎಸ್ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿದ್ದರು.
ಮಠದಹಳ್ಳಿ ಗಂಗೇನಹಳ್ಳಿ ಬಡಾವಣೆ 7/1ಬಿ, ಸಿ ಹಾಗೂ ಡಿ ಸರ್ವೆ ನಂಬರ್ ನಲ್ಲಿ 1.11 ಎಕರೆ ಜಮೀನು ಬಿಡಿಎಗೆ ಭೂಸ್ವಾಧಿನಗೊಂಡಿದ್ದು, ಇದನ್ನು ಡಿನೋಟಿಫೈ ಮಾಡಬೇಕು ಎಂದು ರಾಜಶೇಖರಯ್ಯ ಎಂಬುವರು ಅರ್ಜಿ ಹಾಕುತ್ತಾರೆ. ದಾರಿಯಲ್ಲಿ ಹೋಗುವ ಯಾರೋ ದಾಸಯ್ಯ ಜಮೀನಿಗೆ ಸಂಬಂಧವೇ ಇಲ್ಲದ ರಾಜಶೇಖರಯ್ಯ ಎಂಬುವರು ಅರ್ಜಿ ಕೊಡ್ತಾರೆ. 2007 ರಲ್ಲಿ ಅರ್ಜಿ ಬಂದ ಅದೇ ದಿನ ಮುಖ್ಯಮಂತ್ರಿಯಾಗಿದ್ದ ಹೆಚ್. ಡಿ ಕುಮಾರಸ್ವಾಮಿ ಅವರು ಡಿನೋಟಿಫೈ ಮಾಡಲು ಸೂಚಿಸಿದ್ದರು ಎಂದು ಇತ್ತೀಚೆಗೆ ಕಂದಾಯ ಸಚಿವರು ಆರೋಪಿಸಿದ್ದರು.
ಇದನ್ನೂ ಓದಿ : ಅಕ್ರಮ ಡಿನೋಟಿಫಿಕೇಷನ್ ಪ್ರಕರಣ: ಲೋಕಾಯುಕ್ತ ವಿಚಾರಣೆಗೆ ಹಾಜರಾದ ಬಿ.ಎಸ್.ಯಡಿಯೂರಪ್ಪ - B S Yediyurappa