ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಸಂಭ್ರಮ ಜೋರಾಗಿದ್ದು, ಯುವಕರ ದಂಡೇ ಬೆಟ್ಟಕ್ಕೆ ಹರಿದು ಬರುತ್ತಿದೆ. ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಯುವಕರು ವಧು ಸಿಗಲೆಂದು ಇಷ್ಟಾರ್ಥ ಇಟ್ಟುಕೊಂಡು 110 ಕಿ.ಮೀ ಪಾದಯಾತ್ರೆ ನಡೆಸಿದ್ದಾರೆ.
"ಹೊಸಮಾಲಂಗಿಯಲ್ಲಿ 62 ಮಂದಿ ಯುವಕರಿಗೆ ಮದುವೆಯಾಗಿಲ್ಲ, ಎಷ್ಟು ಹುಡುಕಿದರೂ ವಧು ಸಿಗುತ್ತಿಲ್ಲ. ಮಾದಪ್ಪ ಕರುಣೆ ತೋರಿಸಿ ನಮಗೆ ಮದುವೆ ಮಾಡಿಸು ಎಂದು ಬೇಡಿ ಯಾತ್ರೆ ಹೊರಟ್ಟಿದ್ದೇವೆ" ಎಂದು ಮನು ಎಂಬ ಯಾತ್ರಿ ತಿಳಿಸಿದ್ದಾರೆ.
ದೀಪಾವಳಿ ಜಾತ್ರೆ ಜೋರು: ಅ. 29 ರಿಂದ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಆರಂಭಗೊಂಡಿದ್ದು, ವಿದ್ಯುತ್ ದೀಪಾಲಂಕಾರದಿಂದ ಕ್ಷೇತ್ರ ಕಂಗೊಳಿಸುತ್ತಿದೆ. ದೇವರಿಗೆ ವಿಶೇಷ ಪೂಜೆ, ಅಭಿಷೇಕಗಳು ಸಾಂಪ್ರದಾಯಿಕವಾಗಿ ಜರುಗುತ್ತಿದೆ.
ರಾಜ್ಯ ಅಷ್ಟೇ ಅಲ್ಲದೇ ತಮಿಳುನಾಡಿನಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದು, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಭಕ್ತರಿಗೆ ತೊಂದರೆಯಾಗದಂತೆ ನಿರಂತರ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಎತ್ತ ನೋಡಿದರತ್ತ ಭಕ್ತ ಸಮೂಹವೇ ಕಂಡುಬರುತ್ತಿದೆ.
ಇದನ್ನೂ ಓದಿ: ಚಾಮರಾಜನಗರ: ವಧು ಸಿಗಲೆಂದು ಮಲೆ ಮಾದಪ್ಪನ ಬೆಟ್ಟಕ್ಕೆ ಯುವಕರ ಪಾದಯಾತ್ರೆ