ಮೈಸೂರು: ದೇವರಸನಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆಯ ಪತಿ ಅನುಮಾನಾಸ್ಪದ ಸಾವು ಪ್ರಕರಣವನ್ನು ನಂಜನಗೂಡು ಗ್ರಾಮಾಂತರ ಪೊಲೀಸರು ಭೇದಿಸಿದ್ದಾರೆ. ಬಿಜೆಪಿ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಗೋವರ್ಧನ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಿಜೆಪಿ ಗ್ರಾಮಾಂತರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಹಾಗೂ ದೇವರಸನಹಳ್ಳಿ ಗ್ರಾ.ಪಂ.ಹಾಲಿ ಸದಸ್ಯ ಗೋವರ್ಧನ್ (36), ನಗರದ ನೀಲಕಂಠ ನಗರ ನಿವಾಸಿ ಜಾಹಿರ್ (25), ಹಳ್ಳದಕೇರಿ ನಿವಾಸಿ ಮಣಿಕಂಠ (24), ಕೆ.ಎಚ್.ಬಿ.ಕಾಲೊನಿ ನಿವಾಸಿ ಮಹೇಂದ್ರ (25) ಬಂಧಿತ ಆರೋಪಿಗಳಾಗಿದ್ದಾರೆ.
ದೇವರಸನಹಳ್ಳಿ ಗ್ರಾ.ಪಂ. ಸದಸ್ಯೆ ಕೆಬ್ಬೆಪುರ ಗ್ರಾಮದ ಸೌಭಾಗ್ಯ ಎಂಬವರ ಪತಿ ನಂಜುಂಡಸ್ವಾಮಿ (47) ಅ.6ರಂದು ರಾತ್ರಿ ಗಾಯಗೊಂಡ ಸ್ಥಿತಿಯಲ್ಲಿ ಗದ್ದೆಯ ಬದುವಿನಲ್ಲಿ ಬಿದ್ದಿದ್ದರು. ವಾಯುವಿಹಾರಕ್ಕೆ ತೆರಳಿದ್ದವರು ಗಾಯಾಳು ನಂಜುಂಡಸ್ವಾಮಿಯನ್ನು ಸೋಮವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು.
ಈ ಸಂಬಂಧ ಸೌಭಾಗ್ಯ, ತಮ್ಮ ಪತಿಯನ್ನು ರಾಜಕೀಯಪ್ರೇರಿತ ಉದ್ದೇಶದಿಂದ ಕೊಲೆ ಮಾಡಲಾಗಿದ್ದು, ತನಿಖೆ ನಡೆಸುವಂತೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದನ್ನೂ ಓದಿ: ಉಡುಪಿ: ಹಣ ವಾಪಸ್ ನೀಡದ್ದಕ್ಕೆ ಸ್ನೇಹಿತನ ಕೊಲೆ