ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿಯ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ನಿಯಮ ಉಲ್ಲಂಘಿಸಿ ಸಿ.ಎ (ನಾಗರಿಕ ಸೌಲಭ್ಯ) ನಿವೇಶನ ಹಂಚಿರುವ ಆರೋಪ ಸಂಬಂಧ ಸ್ಪಷ್ಟನೆ ಕೋರಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಮುಡಾ ಬಳಿಕ ಸಿ.ಎ ನಿವೇಶನ ಹಂಚಿಕೆ ಸಂಬಂಧ ರಾಜ್ಯಪಾಲರು ಹಾಗೂ ಸರ್ಕಾರದ ಸಂಘರ್ಷ ಹೆಚ್ಚಾಗುವ ಸಾಧ್ಯತೆ ಗೋಚರಿಸುತ್ತಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲ್ ಖರ್ಗೆ ಅಧ್ಯಕ್ಷತೆಯ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ 5 ಎಕರೆ ನಾಗರಿಕ ಸೌಕರ್ಯಗಳ ನಿವೇಶನವನ್ನು ಮಂಜೂರು ಮಾಡಿದ್ದಾರೆಂದು ಆರೋಪಿಸಿ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿದ್ದರು.
ಕೆಐಎಡಿಬಿ ಸಿ.ಎ ನಿವೇಶನಕ್ಕಾಗಿ ಒಟ್ಟು 193 ಸಂಸ್ಥೆಗಳು ಅರ್ಜಿ ಹಾಕಿದ್ದವು. ಈ ಪೈಕಿ 43 ಸಂಸ್ಥೆ ಆಯ್ಕೆ ಆಗಿದ್ದವು. ಅದರಲ್ಲಿ ಖರ್ಗೆ ಕುಟುಂಬಕ್ಕೆ ಸೇರಿದ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿಯಿಂದ ಐದು ಎಕರೆ ಭೂಮಿ ಹಂಚಿಕೆಯಾಗಿದೆ. ಈ ರೀತಿ ಭೂಮಿ ಹಂಚಿಕೆ ಆಗಿರುವುದರ ಹಿಂದೆ ಪ್ರಭಾವ ಕೆಲಸ ಮಾಡಿದೆ. ಸ್ವಜನಪಕ್ಷಪಾತ ಎದ್ದು ಕಾಣುತ್ತಿದ್ದು, ಈ ಕಾರಣಕ್ಕೆ ತನಿಖೆಯಾಗಬೇಕು ಎಂದು ದೂರು ಸಲ್ಲಿಸಿದ್ದರು.
ಮಾರ್ಚ್ 4ರಂದು ಅರ್ಜಿಗಳ ಪರಿಶೀಲನೆ ನಡೆದಿದ್ದು, ಮಾರ್ಚ್ 5ರಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಂಡು ಮಾರ್ಚ್ 6ರಿಂದ ಹಂಚಿಕೆ ಪತ್ರಗಳನ್ನು ನೀಡಲಾಗಿದೆ. ಇದೆಲ್ಲವನ್ನೂ ಇಷ್ಟು ಅವಸರದಲ್ಲಿ ಏಕೆ ಮಾಡಲಾಗಿದೆ. ಅರ್ಜಿ ಸಲ್ಲಿಸಲು ಕೇವಲ 14 ದಿನಗಳ ಕಾಲಾವಕಾಶ ನೀಡಿ ತರಾತುರಿಯಲ್ಲಿ ಪ್ರಕ್ರಿಯೆ ಮುಗಿಸಿರುವ ಹಿಂದೆ ಸ್ವಜನಪಕ್ಷಪಾತ ಹಾಗೂ ಅಕ್ರಮ ನಡೆದಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಕಳೆದ ವಾರ ದೂರು ನೀಡಿದ್ದರು.
ಇದೀಗ ಈ ಸಂಬಂಧ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಳಿ ಹೆಚ್ಚಿನ ಸ್ಪಷ್ಟನೆ ಕೋರಿ ಪತ್ರ ಬರೆದಿದ್ದಾರೆ. ಟ್ರಸ್ಟ್‌ಗೆ ಕೆಐಎಡಿಬಿ ಸಿ.ಎ ನಿವೇಶನ ಹಂಚಿರುವ ಸಂಬಂಧ ಸ್ಪಷ್ಟನೆ ಕೋರಿದ್ದಾರೆ. ಪ್ರಕರಣದಲ್ಲಿ ನಿಯಮ ಉಲ್ಲಂಘನೆಯಾಗಿದೆಯಾ, ಸ್ವಜನಪಕ್ಷಪಾತ, ತರಾತುರಿಯಲ್ಲಿ ನಿರ್ಣಯ ಕೈಗೊಂಡಿರುವ ಸಂಬಂಧ ವಿವರಣೆ ಕೋರಿದ್ದಾರೆ.
ಈ ಬಗ್ಗೆ ಖಚಿತಪಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಅಂದ ತಕ್ಷಣ ಬೆಳಕಿನ ವೇಗದಲ್ಲಿ ರಾಜ್ಯಪಾಲರು ಕ್ರಮ ಕೈಗೊಳ್ಳುತ್ತಿದ್ದಾರೆ. ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕೆಐಎಡಿಬಿ ಸಿ.ಎ ನಿವೇಶನ ಹಂಚಿರುವ ದೂರಿನ ಸಂಬಂಧ ರಾಜ್ಯಪಾಲರು ವಿವರಣೆ ಕೇಳಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ವಿವರಣೆ ಕೊಡಿ ಅಂತ ಕೇಳಿದ್ದಾರೆ. ಆದರೆ, ಬಿಜೆಪಿ-ಜೆಡಿಎಸ್ ದಾಖಲೆಗಳು ಅವರ ಟೇಬಲ್ನಲ್ಲಿ ಕೊಳೆಯುತ್ತಿವೆ. ಅದಕ್ಕೇನು ರಾಜ್ಯಪಾಲರು ವಿವರಣೆ ಕೇಳಿಲ್ಲ. ಕೆಲವು ಸ್ಪಷ್ಟನೆ ಕೋರಿ ಎನ್ಡಿಎ ನಾಯಕರ ವಿರುದ್ಧದ ಪ್ರಕರಣ ಕಳಿಸಿ ಬಿಟ್ಟಿದ್ದಾರೆ. ಬಿಜೆಪಿ ನಾಯಕರ ಪ್ರಕರಣದಲ್ಲಿ ನನ್ನ ಬಳಿ ಫೈಲ್ ಇಲ್ಲ ಅಂತ ರಾಜ್ಯಪಾಲರು ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಖರ್ಗೆಯವರ ಟ್ರಸ್ಟ್‌ಗೆ ಮೆರಿಟ್ ಮತ್ತು ನಿಯಮಗಳ ಅನುಸಾರ ಸಿ.ಎ ನಿವೇಶನ ಹಂಚಿಕೆ: ಸಚಿವ ಎಂ.ಬಿ.ಪಾಟೀಲ್ - Land To Kharge Trust