ಕಾರವಾರ (ಉತ್ತರ ಕನ್ನಡ): "ಸೈಬರ್ ಹಾಗೂ ಇನ್ನಿತರ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನದ ಜೊತೆಗೆ ಉತ್ತಮ ತರಬೇತಿಗಳನ್ನು ಪೊಲೀಸ್ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಗೆ ನೀಡಲಾಗಿದೆ" ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು ಪೊಲೀಸರಿಗೆ ತರಬೇತಿ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆ ಮಾಡಲಾಗಿದೆ. ತಂತ್ರಜ್ಞಾನಗಳ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ. ಈಗ ಹೊಸ ಹೊಸ ಅಪರಾಧಗಳು ನಡೆಯುತ್ತಿವೆ. ಮೊದಲು ದರೋಡೆ ಪ್ರಕರಣಗಳು ಹೆಚ್ಚು ಆಗುತ್ತಿದ್ದವು. ಈಗ ಅಪರಾಧಗಳ ಸ್ವರೂಪ ಬದಲಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ಕುಳಿತು ಮೋಸ ಮಾಡಬಹುದು. ಸೈಬರ್ ಮೂಲಕ ಅನೇಕ ರೀತಿಯ ವಂಚನೆಗಳು ನಡೆಯುತ್ತಿವೆ ಎಂದರು.
ವಂಚಕರು ಅಪರಾಧ ಮಾಡುವ ವಿಧಾನಗಳನ್ನು ಬದಲಾವಣೆ ಮಾಡಿಕೊಳ್ಳುತ್ತಾ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆಯ ಕಚೇರಿಯ ಸಂಖ್ಯೆಯಿಂದಲೇ ವಿಪಿಎನ್ ತಂತ್ರಜ್ಞಾನ ಬಳಕೆ ಮಾಡಿ ಕರೆ ಮಾಡಿ ವಂಚನೆ ಮಾಡುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಇದರಿಂದ ಜನರು ಭೀತಿಗೆ ಒಳಗಾಗುತ್ತಿದ್ದಾರೆ. ಜನರು ಜಾಗೃತರಾಗಬೇಕು. ಹೊಸ ತಂತ್ರಜ್ಞಾನಗಳನ್ನು ವಂಚಕರು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎಡಿಜಿಪಿ ತಿಳಿಸಿದರು.
ಒಂದು ವರ್ಷ ತರಬೇತಿ; ಸೈಬರ್ ವಂಚನೆ, ಮಹಿಳೆಯರಿಗೆ ಸಂಬಂಧಪಟ್ಟ ಅಪರಾಧ, ಪೋಕ್ಸೊ, ಎಐ ಬಳಕೆ, ಡ್ರೋನ್ ಬಳಕೆ ಮಾಡಿ ದುಷ್ಕೃತ್ಯ, ಆರ್ಥಿಕ ಅಪರಾಧ, ಮಾದಕ ವಸ್ತುಗಳ ಬಗ್ಗೆ ಹೆಚ್ಚಿನ ಅಪರಾಧಗಳು ನಡೆಯುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆಗೂ ತರಬೇತಿ ನೀಡಲಾಗುತ್ತಿದೆ. ಪೊಲೀಸ್ ತರಬೇತಿಯಲ್ಲಿ ಸಾಕಷ್ಟು ಹೊಸತನ ತರಲಾಗಿದೆ. ಜರ್ಮನ್ ತಂತ್ರಜ್ಞಾನದ ಸಂದರ್ಭ ಆಧಾರಿತ ತರಬೇತಿ ಕೋರ್ಸ್ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನೀಡಲಾಗುತ್ತಿದೆ. ಅಲ್ಲದೆ ತರಬೇತಿಯ ಅವಧಿಯನ್ನು ಒಂದು ವರ್ಷ ಮಾಡಲಾಗಿದೆ. ಬಡ್ತಿ ಹೊಂದಿದವರು ಕಡ್ಡಾಯವಾಗಿ ತರಬೇತಿ ಪಡೆಯುವಂತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ ವರ್ಷದಿಂದ ಸ್ಯಾಂಡ್‌ವಿಚ್ ಕೋರ್ಸ್ ಜಾರಿಗೆ ತರಲಾಗಿದೆ. ಇದರಲ್ಲಿ ಐದು ತಿಂಗಳ ತರಬೇತಿ ನಂತರ ಅಭ್ಯರ್ಥಿಗಳಿಗೆ ಮಧ್ಯಂತರ ಪರೀಕ್ಷೆ ಮತ್ತು ವಾಸ್ತವ ಪ್ರಯೋಗ ನಡೆಸಲಾಗುತ್ತದೆ. ಕಾನ್‌ಸ್ಟೆಬಲ್‌ಗಳಿಗೆ ಈ ವರ್ಷದಿಂದಲೇ ಈ ಕೋರ್ಸ್ ಅಡಿ ತರಬೇತಿ ನೀಡಲಾಗುತ್ತಿದೆ. ಪೊಲೀಸರಿಗೆ ತರಬೇತಿ ನೀಡಲು ಇನ್ಫೋಸಿಸ್ ಸಹಾಯದೊಂದಿಗೆ ಸೈಬರ್ ಲ್ಯಾಬ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಸೈಬರ್ ಕಳ್ಳರು ಪೊಲೀಸರಿಗಿಂತ ಹೆಚ್ಚಾಗಿ ಸೈಬರ್ ಅಪರಾಧದಲ್ಲಿ ಸಂಶೋಧನೆ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿರುವುದರಿಂದ ವಂಚಕರು ಒಂದು ಹೆಜ್ಜೆ ಮುಂದಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಈಗಾಗಲೇ ಒಂದು ಸೈಬರ್ ಲ್ಯಾಬ್ ಮಂಜೂರಾಗಿದೆ. ಬೆಂಗಳೂರಿನಿಂದ ಹೊರಗಡೆ ಇರುವ ಮೊದಲ ಸೈಬರ್ ಲ್ಯಾಬ್ ಇದಾಗಲಿದೆ ಎಂದು ತಿಳಿಸಿದರು.
ಇನ್ಫೋಸಿಸ್ ನೆರವು; ಇನ್ನೊಂದು ಸುಸಜ್ಜಿತ ಸೈಬರ್ ಲ್ಯಾಬ್ ನಿರ್ಮಿಸಲು ಇನ್ಫೋಸಿಸ್ ನೆರವು ಕೇಳಲಾಗಿದೆ. ಇನ್ಫೋಸಿಸ್ ಮೈಸೂರು ವಿಭಾಗದ ಮುಖ್ಯಸ್ಥ ವಿನಾಯಕ ಹೆಗಡೆ ಅವರನ್ನು ಸಂಪರ್ಕಿಸಿ ಸಿಎಸ್‌ಆರ್ ಅನುದಾನದಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸೈಬರ್ ಲ್ಯಾಬ್ ನಿರ್ಮಿಸಿಕೊಡಲು ಕೇಳಲಾಗಿದೆ. ಈಗಾಗಲೇ ಅವರು ಸಿಐಡಿಗೆ ಒಂದು ಸೈಬರ್ ಲ್ಯಾಬ್ ನಿರ್ಮಿಸಿಕೊಟ್ಟಿದ್ದಾರೆ.
ನಮ್ಮ ಅಧಿಕಾರಿಗಳಿಗೆ ಹೆಚ್ಚಿನ ಅರಿವು ಮೂಡಬೇಕಾಗಿದೆ. ಈ ಕಾರಣದಿಂದ ಮೇಲಿಂದ ಮೇಲೆ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ. ನಮ್ಮ ಅಧಿಕಾರಿಗಳು ಕೂಡ ಈ ಬಗ್ಗೆ ತಿಳಿದುಕ್ಕೊಳ್ಳುವುದು ಸಾಕಷ್ಟು ಇದೆ. ತಮ್ಮ ಜವಾಬ್ದಾರಿ, ಸಿಆರ್‌ಪಿಸಿ ಬದಲು ಇದೀಗ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಜಾರಿಯಾಗಿದೆ. ಈ ಕಾಯ್ದೆ ಬಗ್ಗೆ ಮೊದಲು ನಮ್ಮ ಸಿಬ್ಬಂದಿಗಳಿಗೆ ಹೆಚ್ಚಿನ ತಿಳುವಳಿಕೆ ಮೂಡಬೇಕಾಗಿರುವ ಕಾರಣ ಪ್ರತಿ ತರಬೇತಿ ಕೇಂದ್ರ ಹಾಗೂ ಪ್ರತ್ಯೇಕವಾಗಿ ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತಿದೆ.
ರಾಜ್ಯದಲ್ಲಿ ಇದೀಗ 5 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 500ಕ್ಕೂ ಹೆಚ್ಚು ಪಿಎಸ್‌ಐ ನೇಮಕಾತಿಯಾಗಿದೆ. ಇದರಿಂದ ರಾಜ್ಯದಲ್ಲಿರುವ ಎಲ್ಲ ಪೊಲೀಸ್ ತರಬೇತಿ ಶಾಲೆಗಳು ತುಂಬಿವೆ. ಆದರೆ ಕಾರವಾರ, ಹಾವೇರಿ, ಹುಬ್ಬಳ್ಳಿ-ಧಾರವಾಡದಲ್ಲಿರುವ ತಾತ್ಕಾಲಿಕ ತರಬೇತಿ ಶಾಲೆಗಳಲ್ಲಿ ಅವಶ್ಯಕತೆ ಇದ್ದಲ್ಲಿ ಬಳಸಿಕೊಳ್ಳಲು ಇನ್ನಿತರ ಬ್ರಿಡ್ಜ್ ಕೋರ್ಸ್ಗಳಿಗೆ ಇಲ್ಲಿನ ತರಬೇತಿ ಶಾಲೆಗಳ ಪರಿಶಿಲನೆ ನಡೆಸಲಾಗುತ್ತಿದೆ. ಅಗತ್ಯ ಬಿದ್ದಲ್ಲಿ ಇವುಗಳನ್ನು ಬಳಸಿಕೊಂಡು ಪೊಲೀಸರಿಗೆ ತರಬೇತಿ ನೀಡುವ ಉದ್ದೇಶ ಇದೆ.
1300 ಸಿಪಿಸಿ, 500ರಷ್ಟು ಪಿಎಸ್ಐ ನೇಮಕಾತಿ ಮಾಡಲಾಗಿದೆ. ದೇಶದಲ್ಲಿ ಜುಲೈನಿಂದ ಮೊದಲನೇ ವಾರದಿಂದ ಹೊಸ ಅಪರಾಧಿ ಕಾಯಿದೆ ಜಾರಿಯಾಗಿದೆ. ಈ ಬಗ್ಗೆ ತರಬೇತಿ ಎಲ್ಲರಿಗೂ ತರಬೇತಿ ನೀಡಲಾಗಿದೆ. ಈ ಬಗ್ಗೆ ಎಷ್ಟರ ಮಟ್ಟಿಗೆ ಅರಿವು ನಮ್ಮ ಅಧಿಕಾರಿಗಳಿಗೆ ಇದೆ ಎನ್ನುವುದರ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಈ ಬಗ್ಗೆ ಕಾಲ ಕಾಲಕ್ಕೆ ಹೊಸ ಹೊಸ ತರಬೇತಿಗಳನ್ನು ನೀಡಲಾಗುತ್ತಿರುತ್ತದೆ. ಈ ಹಿಂದೆ ಭಾರತೀಯ ದಂಡ ಸಂಹಿತೆ ಎಂದಿದ್ದ ವ್ಯವಸ್ಥೆಯ ಹೆಸರನ್ನು ಈಗ ಭಾರತೀಯ ನ್ಯಾಯ ಸಂಹಿತೆ ಎಂದು ಮಾಡಲಾಗಿದೆ. ಇದಕ್ಕಾಗಿ ದಂಡದಿಂದ ನ್ಯಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಇಲಾಖೆಯವರು ತಮ್ಮ ಮನೋಭಾವನೆಯನ್ನು ಸಹ ಬದಲಾವಣೆ ಮಾಡಿಕೊಳ್ಳಬೇಕು ಎಂದು ಎಡಿಜಿಪಿ ಅಲೋಕ್ಕುಮಾರ್ ವಿವರಿಸಿದರು. ಮಾಧ್ಯಮಗೋಷ್ಟಿಯಲ್ಲಿ ಎಸ್ಪಿ ನಾರಾಯಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: 3 ಕೋಟಿ ರೂ ವಂಚನೆ ಆರೋಪ: ಆನ್‌ಲೈನ್ ಗೇಮಿಂಗ್ ಆ್ಯಪ್ ವಿರುದ್ಧ ಪ್ರಕರಣ ದಾಖಲು