ಹಾವೇರಿ : ನನ್ನ ಮಂತ್ರಿ ಮಾಡಿದ ಕೀರ್ತಿ ರಾಣೆಬೆನ್ನೂರು ಜನತೆಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಆರ್. ಶಂಕರ್ ಅವರು ಹೇಳಿದ್ರು. ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ಮಾತನಾಡಿದ ಅವರು, ನನಗೆ ಶಾಸಕನಾಗಿ ಇರುವ ಆಸೆ ಇಲ್ಲ ಎಂದು ತಿಳಿಸಿದರು. ಆದರೆ ನನಗೆ ನಿಮ್ಮ ಸೇವೆ ಮಾಡ್ಬೇಕು ಅನ್ನೋ ಆಸೆ ಇದೆ. ನನ್ನ ಪರ ದುಡಿದವರಿಗೆ ನಾನು ಸೇವೆ ಮಾಡುವೆ ಎಂದು ಭಾವುಕರಾದರು.
ರಾಣೆಬೆನ್ನೂರಿನ ತಮ್ಮ ಕಚೇರಿಯಲ್ಲಿ ಅಭಿಮಾನಿಗಳ ಮತ್ತು ಕಾರ್ಯಕರ್ತರ ಸಭೆ ನಡೆಸಿದ ಅವರು, ಪದೇ ಪದೆ ಕೆಲ ಜನರು ಮಾತಿನಿಂದ ನನ್ನ ಕೊಲ್ಲುತ್ತಿದ್ದಾರೆ. ರಾಣೆಬೆನ್ನೂರು ತಾಲೂಕು ಅಭಿವೃದ್ಧಿಗೆ ನಾನು ಅಂದು ಕೆಲವು ನಿರ್ಧಾರ ತೆಗೆದುಕೊಂಡಿದ್ದೇನೆ ಹೊರತು, ನನ್ನ ಸ್ವಂತಕ್ಕಾಗಿ ಅಲ್ಲ. ನನ್ನನ್ನು ಗುಲಾಮನಾಗಿ ಕಂಡವರು ಅಂದಿನ ಇಬ್ಬರು ಮುಖ್ಯಮಂತ್ರಿಗಳು. ಅದರಲ್ಲಿ ಒಬ್ಬರು ಬಿ. ಎಸ್ ಯಡಿಯೂರಪ್ಪನವರು ಎಂದು ಅವರು ಆರೋಪಿಸಿದರು.
ಮಾಜಿ ಸಿಎಂಗಳಾದ ಯಡಿಯೂರಪ್ಪ ಮತ್ತು ಬೊಮ್ಮಾಯಿ ವಿರುದ್ಧ ಶಂಕರ್ ಇದೇ ವೇಳೆ ವಾಗ್ದಾಳಿ ನಡೆಸಿದರು. ತಾಲೂಕಿನ ಅಭಿವೃದ್ಧಿಗೆ ಅಂದು ನಾ ಬಿಜೆಪಿಗೆ ನಂಬಿ ಹೋದೆ. ಆದರೆ ಬಿಎಸ್ವೈ ಕುತ್ತಿಗೆ ಹಿಸುಕಿ ಕೊಂದರು ಎಂದು ಶಂಕರ್ ದೂರಿದರು.
ಮನೆಗೆ ಬಂದು ರೊಟ್ಟಿಬುತ್ತಿ ನೀಡಿದ್ದ ಬೊಮ್ಮಾಯಿ ನನಗೆ ಮೋಸ ಮಾಡಿದರು. ನನ್ನನ್ನು ಕೊಂದಿದ್ದಾರೆ ಅಂತಾ ಶಂಕರ್ ಭಾವುಕರಾದರು. ಕಾಂಗ್ರೆಸ್ ಪಕ್ಷದ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗೆ 1 ಲಕ್ಷಕ್ಕೂ ಹೆಚ್ಚು ಮತಗಳನ್ನು ನಾನು ಕೊಡಿಸುವೆ. ಕಾಂಗ್ರೆಸ್ ಪಕ್ಷಕ್ಕೆ ನಾನು ಬೆಂಬಲ ನೀಡ್ತೇನೆ ಎಂದು ಶಂಕರ್ ಹೇಳಿದರು.
ನಾನು ಇಲ್ಲಿಯೇ ರಾಜಕೀಯ ಮಾಡಬೇಕೆಂಬುದು ಇಲ್ಲ. ನನ್ನನ್ನು ಗುರುತಿಸುವಂತಹ ಕೆಲಸವನ್ನು ನೀವು ಮಾಡಿದ್ರೆ. ಪಕ್ಷದಿಂದ ನನ್ನನ್ನು ಗುರುತಿಸುತ್ತಾರೆ. ನೀವು ಪ್ರಾಮಾಣಿಕವಾಗಿ ಗುರುತಿಸಿದರೆ, ನಾನು ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿದರೆ, ನನಗೆ ಇಲ್ಲಿಯಾಗಬಹುದು, ಎಲ್ಲಿಯಾದರೂ ಸ್ಥಾನ ಸಿಗುತ್ತೆ ಎಂದರು.
ನಾನು ರಾಜಕಾರಣಿ ಆಗುತ್ತೇನೋ, ಹಾಗೆಯೇ ಇರುತ್ತೇನೋ ಅದು ನನ್ನ ಹಣೆಬರಹ. ನಾನು ಪ್ರಾಮಾಣಿಕವಾಗಿ ದುಡಿದವರಿಗೆ ರಕ್ಷಣೆಯಾಗಿ ನಿಲ್ಲಬೇಕು, ಅದು ನನ್ನ ಗುರಿ ಎಂದು ಇದೇ ವೇಳೆ ಆರ್ ಶಂಕರ್ ತಿಳಿಸಿದರು.
ಇದನ್ನೂ ಓದಿ : ತಪ್ಪಿದ ಬಿಜೆಪಿ ಟಿಕೆಟ್: ಎನ್ಸಿಪಿ ಸೇರ್ಪಡೆಯಾದ ಆರ್ ಶಂಕರ್