ಮಂಡ್ಯ : ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಾರೆಂಬುದಕ್ಕೆ ತೆರೆ ಬಿದ್ದಿದೆ. ಮಾಜಿ ಸಿಎಂ ಕುಮಾರಸ್ವಾಮಿಯವರೇ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂದು ಮಾಜಿ ಸಚಿವ ಸಿ. ಎಸ್ ಪುಟ್ಟರಾಜು ಇಂದು ಪಾಂಡವಪುರದಲ್ಲಿ ಹೇಳಿದ್ದಾರೆ. ಕುಮಾರಸ್ವಾಮಿಯವರು ಆಸ್ಪತ್ರೆಯಿಂದ ಬಂದ ನಂತರ ಅವರೇ ಹೇಳುತ್ತಾರೆ. ನಾವು ಮಂಡ್ಯ, ಹಾಸನ, ಕೋಲಾರ ಕ್ಷೇತ್ರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿ ಹೋಗಲಿ. ನಾವೆಲ್ಲರೂ ದೇವೇಗೌಡರ ಆಶೀರ್ವಾದ ಹಾಗೂ ನರೇಂದ್ರ ಮೋದಿಯವರ ಸಹಕಾರದಿಂದ ಒಗ್ಗಟ್ಟಿನಿಂದ ಅವರನ್ನು ಗೆಲ್ಲಿಸುತ್ತೇವೆ ಅಂತ ಹೇಳಿದ್ದಾರೆ.
ಒಂದೆಡೆ ಸಂಸದೆ ಸುಮಲತಾ ಅಂಬರೀಶ್ ದೆಹಲಿಗೆ ತೆರಳಿ ಟಿಕೆಟ್ಗಾಗಿ ಲಾಬಿ ನಡೆಸಿದ್ರು. ಆದ್ರೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿಲ್ಲ ಎನ್ನಲಾಗ್ತಿದೆ. ಈ ಬಗ್ಗೆ ಮಾತಾಡಿರುವ ಮಾಜಿ ಸಂಸದ ಪುಟ್ಟರಾಜು ಅವರು ಸುಮಲತಾ ಅವರೊಂದಿಗೆ ನಾವು ಮಾತನಾಡುತ್ತೇವೆ. ಈ ಹಿಂದೆ ನಮ್ಮ ಅವರ ನಡುವೆ ಸಣ್ಣಪುಟ್ಟ ವ್ಯತ್ಯಾಸಗಳಿದ್ದವು. ರಾಜಕೀಯದಲ್ಲಿ ಯಾರೂ ಶತ್ರುವೂ ಅಲ್ಲ, ಮಿತ್ರರೂ ಅಲ್ಲ. ಮಂಡ್ಯ ಅಂದ್ರೆ ಇಂಡಿಯಾ ಎಂಬ ಹೆಸರಿದೆ. ಅದಕ್ಕೆ ನಾವು ಹೊಸ ನಾಂದಿ ಹಾಡಲು ಕುಮಾರಸ್ವಾಮಿಯವರನ್ನು ತರುತ್ತಿದ್ದೇವೆ ಎಂದರು.
ಸ್ಟಾರ್ ಚಂದ್ರು ಸ್ಥಳೀಯ ಅಭ್ಯರ್ಥಿ ಎಂದು ಮತ ಕೇಳ್ತಿರುವ ವಿಚಾರವಾಗಿ ಮಾತನಾಡಿ, ಕುಮಾರಣ್ಣನ ತೋಟದ ಮನೆಗೆ 20 ನಿಮಿಷದ ಜರ್ನಿ ಅಷ್ಟೇ. ಸ್ಟಾರ್ ಚಂದ್ರು ಮನೆ ಇರೋದು ಡಾಲರ್ಸ್ ಕಾಲೋನಿಯಲ್ಲಿ. ಅವ್ರ ಮನೆಗೆ ಹೋಗಲು ಎರಡು ಗಂಟೆ ಬೇಕು. ಯಾರು ದೂರದಲ್ಲಿದ್ದಾರೆ ಅಂತ ಮಂಡ್ಯ ಜನ ತೀರ್ಮಾನ ಮಾಡ್ತಾರೆ. ಮಂಡ್ಯ ಜನ ಕುಮಾರಣ್ಣನನ್ನು ಹೃದಯದಲ್ಲಿ ಇಟ್ಕೊಂಡಿದ್ದಾರೆ ಎಂದರು.
ಒಟ್ಟಾರೆ, ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಹುತೇಕ ಖಚಿತವಾದಂತಾಗಿದೆ. ಇನ್ನು ಸಂಸದೆ ಸುಮಲತಾ ಅಂಬರೀಶ್ ಅವರ ನಡೆ ಏನು ಎಂಬುದು ಮಾತ್ರ ನಿಗೂಢವಾಗಿದೆ. ಅವರು ಮೈತ್ರಿ ಅಭ್ಯರ್ಥಿಗೆ ಸಪೋರ್ಟ್ ಮಾಡ್ತಾರಾ? ಇಲ್ಲ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿತಾರಾ? ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : ಮಾಜಿ ಸಿಎಂ ಕುಮಾರಸ್ವಾಮಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ: ನಿಖಿಲ್ ಕುಮಾರಸ್ವಾಮಿ ಮಾಹಿತಿ - HD Kumaraswamy Heart Surgery