ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆ ತಾಲೂಕಿನ ಹೆಬ್ಬಾಳ ಏಳು ಪೌಲ್ಟ್ರಿ ಫಾರಂ ನಡುವೆ ಇರುವ ಗ್ರಾಮ. ಅ ಗ್ರಾಮದ ವಿಪರೀತ ನೊಣಗಳ ಕಾಟಕ್ಕೆ ನಲುಗಿ ಹೋಗಿದೆ. ಗುಂಪು ಗುಂಪಾಗಿ ಈ ಗ್ರಾಮಕ್ಕೆ ನೊಣಗಳು ಲಗ್ಗೆ ಇಡ್ತಿವೆ. ಪೌಲ್ಟ್ರಿ ಫಾರಂನಿಂದ ನೇರವಾಗಿ ಗ್ರಾಮಕ್ಕೆ ಬರುವ ನೊಣಗಳ ಕಾಟದಿಂದ ಈ ಗ್ರಾಮದ ಜನ ರೋಸಿ ಹೋಗಿದ್ದಾರೆ.
ಅಲ್ಲದೇ 2015ರಿಂದ ಈ ಸಮಸ್ಯೆ ಇದ್ದು, ಈವರೆಗೆ ಎಷ್ಟೋ ಜಿಲ್ಲಾಧಿಕಾರಿಗಳು ಬಂದ್ರು ಕೂಡ ಸಮಸ್ಯೆಗೆ ಮಾತ್ರ ಅಂತ್ಯ ಎಂಬುದು ಸಿಕ್ಕಿಲ್ಲ. ಇದೀಗ ಜಿಲ್ಲಾ ಪಂಚಾಯತ್ ಸಿಇಒ ಸುರೇಶ್ ಬಿ ಇಟ್ನಾಳ್ ಅವರು ಸಮಸ್ಯೆ ನಿವಾರಿಸಲು ಮುಂದಾಗಿದ್ದಾರೆ. ನೊಣಗಳನ್ನು ನಿಯಂತ್ರಿಸದಿದ್ದರೆ ಪೌಲ್ಟ್ರಿ ಫಾರಂಗಳ ವಿರುದ್ಧ ಕ್ರಮತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಈಟಿವಿ ಭಾರತ್ ವರದಿ ಮಾಡಿದ್ದು, ಇದನ್ನು ಗಮನಿಸಿದ ಸಿಇಒ ಸುರೇಶ್ ಬಿ ಇಟ್ನಾಳ್ ಅವರು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಸಿಇಒ ಸುರೇಶ್ ಬಿ ಇಟ್ನಾಳ್ ಹೇಳಿದ್ದೇನು?: "ಈಗಿನ ವಾತಾವರಣದಲ್ಲಿ ನೊಣಗಳ ಪ್ರಮಾಣ ಹೆಚ್ಚಿದೆ. ಪೌಲ್ಟ್ರಿ ಫಾರಂ ಇರುವ ಗ್ರಾಮಗಳಲ್ಲೂ ನೊಣಗಳು ಹೆಚ್ಚಾಗಿವೆ. ಈ ಬಗ್ಗೆ ನಾನು ಹಾಗೂ ಜಿಲ್ಲಾಧಿಕಾರಿ ಇಬ್ಬರೂ ಚರ್ಚಿಸಿದ್ದೇವೆ. ಹೆಬ್ಬಾಳ ಗ್ರಾಮ ಪಂ.ಗೆ ನಿರ್ದೇಶನ ಕೊಟ್ಟಿದ್ದೇವೆ. ಗ್ರಾ.ಪಂ ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿರುವವರ ವಿರುದ್ಧ ಕ್ರಮತೆಗೆದುಕೊಳ್ಳಲಿದ್ದಾರೆ. ಕಳೆದ ಬಾರಿ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಕೂಡ ಅವರನ್ನು ಕರೆದು ನೊಣಗಳು ಉತ್ಪತ್ತಿ ಆಗದಂತೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ತರಬೇತಿ ಕೊಟ್ಟಿದ್ದಾರೆ. ಇದೀಗ ಪುನಃ ನೊಣಗಳನ್ನು ನಿಯಂತ್ರಣ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದೇವೆ. ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ನೊಣಗಳನ್ನು ನಿಯಂತ್ರಿಸದಿದ್ದರೆ ಪೌಲ್ಟ್ರಿಗಳನ್ನು ಬಂದ್ ಮಾಡುವ ಕೆಲಸ ಮಾಡ್ತೇವೆ. ಹೆಬ್ಬಾಳ ಗ್ರಾ.ಪಂಯಿಂದ ನೋಟಿಸ್ ಕೊಡಲಾಗಿದೆ'' ಎಂದು ಜಿ.ಪಂ ಸಿಇಓ ಸುರೇಶ್ ಇಟ್ನಾಳ್ ಎಚ್ಚರಿಕೆ ನೀಡಿದ್ದಾರೆ.
ಬೇಕರಿ, ದಿನಸಿ ಅಂಗಡಿ, ಸಲೂನ್, ಹೋಟೆಲ್ ಬಂದ್ !: ನೊಣಗಳೀಗ ಹೋಟೆಲ್, ಅಂಗಡಿ ಉದ್ಯಮಕ್ಕೂ ಕಂಠಕವಾಗಿವೆ. ಬೇಕರಿ, ದಿನಸಿ ಅಂಗಡಿ, ಸಲೂನ್, ಹೋಟೆಲ್ಗೆ ಲಗ್ಗೆ ಇಡ್ತಿರುವ ನೊಣಗಳು ತಿನ್ನುವ ವಸ್ತುಗಳ ಮೇಲೆ ಬಂದು ಕೂರುವುದು ಮಾಲೀಕರನ್ನು ಚಿಂತೆಗೀಡು ಮಾಡಿದೆ. ಕೆಲವೆಡೆ ಮಾಲೀಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದಾರೆ.