ಕಡಬ (ದಕ್ಷಿಣ ಕನ್ನಡ): ಎರಡು ವಾರಗಳ ಹಿಂದೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಗೋಳಿತ್ತಡಿಯ ನೆಬಿಸಾ ಅವರ ಮನೆಯಲ್ಲಿ ನಡೆದಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಪ್ರಕರಣ ಭೇದಿಸುವಲ್ಲಿ ಕಡಬ ಪೊಲೀಸರು ಯಶಸ್ವಿಯಾಗಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಇನ್ನೂ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಸಾದತ್ ಆಲಿ ಫರಂಗಿಪೇಟೆ (30) ಹಾಗೂ ಹಮೀದ್ ವಳಚ್ಚಿಲ್(31) ಬಂಧಿತರು.
ಘಟನೆ ಹಿನ್ನೆಲೆ: ಆರೋಪಿಗಳು ಮಾ. 11ರಂದು ರಾಮಕುಂಜ ಗ್ರಾಮದ ನೆಬಿಸಾ ಅವರ ಮನೆಯ ಹಿಂಬಾಗಿಲಿನ ಕಬ್ಬಿಣದ ಶಟರ್ಸ್ ಮುರಿದು, ಬೀಗ ತೆಗೆದು ಕೊಠಡಿಯ 8 ಕಪಾಟುಗಳಲ್ಲಿ ನಗದು ಹಾಗೂ ಚಿನ್ನಕ್ಕೆ ಜಾಲಾಡಿದ್ದರು. ಈ ಪೈಕಿ ನೆಬಿಸಾ ಅವರ ರೂಮ್‌ನ ಕಪಾಟಿನಲ್ಲಿದ್ದ 1.08 ಲಕ್ಷ ರೂ. ನಗದು ಹಾಗೂ 13 ಪವನ್ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಅದರಲ್ಲಿ 24 ಗ್ರಾಂ ತೂಕದ 2 ಚಿನ್ನದ ಬಳೆ, 20 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಸರ, 20 ಗ್ರಾಂ ಚಿನ್ನದ ಸರ, 12 ಗ್ರಾಂ ತೂಕದ 6 ಚಿನ್ನದ ಉಂಗುರಗಳು, 28 ಗ್ರಾಂನ ಒಂದು ಚಿನ್ನದ ಬ್ರಾಸ್ಲೆಟ್ ಇದ್ದವು. ಅದರ ಒಟ್ಟು ಮೌಲ್ಯ 5.20 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು. ಈ ಬಗ್ಗೆ ನೆಬಿಸಾ ಅವರ ಪುತ್ರ ಸಿದ್ದಿಕ್ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನೆಬಿಸಾ ಅವರು ಮಗಳು ನಸೀಮಾ, ಅಳಿಯ ನಾಸೀರ್ ಹಾಗೂ ಮಕ್ಕಳೊಂದಿಗೆ ಮಾ.7ರಂದು ಮನೆಗೆ ಬೀಗ ಹಾಕಿ, ನಸೀಮಾ ಅವರ ಹೆರಿಗೆಗಾಗಿ ಮಂಗಳೂರಿನ ಕಣಚೂರು ಆಸ್ಪತ್ರೆಗೆ ತೆರಳಿದ್ದರು. ಮಾ. 11ರಂದು ಮಧ್ಯಾಹ್ನ 3.30ರ ವೇಳೆಗೆ ನೆಬಿಸಾ ಸಂಬಂಧಿಕರಾಗಿದ್ದ ಫಾಯಿಸಾ ಅವರು ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು.
ನೆಬಿಸಾ ಅವರ ಎದುರಿನ ಮನೆಯವರ ಸಿಸಿಟಿವಿಯಲ್ಲಿ ಮಾ. 11ರ ಮುಂಜಾನೆ 2.30ರ ವೇಳೆಗೆ ಕಾರಿನಲ್ಲಿ ಬಂದವರು ನೆಬಿಸಾ ಅವರ ಮನೆಗೆ ಹೋಗಿ ಅಲ್ಲಿಂದ ಸುಮಾರು ಹೊತ್ತಿನ ಬಳಿಕ ಹೊರಬಂದು ಮತ್ತೆ ಕಾರಿನಲ್ಲಿ ತೆರಳಿರುವ ದೃಶ್ಯ ಸೆರೆಯಾಗಿತ್ತು.
ನೆಬಿಸಾ ಅವರ ಮನೆಗೆ ಬೀಗ ಹಾಕಿರುವ ಬಗ್ಗೆ ಆರೋಪಿ ಹಮೀದ್ ಇತರ ಆರೋಪಿಗಳಿಗೆ ಮಾಹಿತಿ ನೀಡಿದ್ದ ಎಂದು ಹೇಳಲಾಗಿದೆ. ವಳಚ್ಚಿಲ್ ನಿವಾಸಿಯಾಗಿರುವ ಹಮೀದ್ ಮದುವೆ ಬಳಿಕ ಕಂತೂರಿನ ಹೆಂಡತಿ ಮನೆಯಲ್ಲಿಯೇ ವಾಸವಾಗಿದ್ದ. ಎರಡು ತಿಂಗಳ ಹಿಂದೆ ಹಮೀದ್ ಸೇರಿ ಇಬ್ಬರು, ನೆಬಿಸಾ ಅವರ ಮನೆಗೆ ಕಟ್ಟಿಗೆ ತುಂಡರಿಸಲು ಬಂದಿದ್ದರು. ಈ ವೇಳೆ ಹಮೀದ್ ನೆಬಿಸಾ ಅವರ ಮನೆಯವರ ಪರಿಚಯ ಮಾಡಿಕೊಂಡಿದ್ದ. ಮನೆಯವರೆಲ್ಲರೂ ಬೀಗ ಹಾಕಿ ಹೋಗಿರುವುದನ್ನು ತಿಳಿದುಕೊಂಡಿದ್ದ ಹಮೀದ್ ಫರಂಗಿಪೇಟೆಯ ಸ್ನೇಹಿತರಿಗೆ ಮಾಹಿತಿ ನೀಡಿ ಕಳ್ಳತನಕ್ಕೆ ಸಂಚು ರೂಪಿಸಿದ್ದ. ಇತರ ಆರೋಪಿಗಳೊಂದಿಗೆ ಕಳವಿಗೆ ಕಾರಿನಲ್ಲಿ ಬಂದಿದ್ದ ಹಮೀದ್ ಕಾರಿನಲ್ಲೇ ಉಳಿದುಕೊಂಡಿದ್ದ ಎನ್ನಲಾಗಿದೆ. ಬಂಧಿತ ಇನ್ನೋರ್ವ ಆರೋಪಿ ಸಾದತ್ ಆಲಿ ವಿರುದ್ಧ 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ವಿವಿಧ ಠಾಣೆಯಲ್ಲಿ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆ ಕಾರ್ಯಕ್ರಮದಲ್ಲಿ ಕಳ್ಳತನ: ಓರ್ವನ ಬಂಧನ, ₹61 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ - Dharwad Theft Case