ಬೆಂಗಳೂರು: ನಕಲಿ ಜನ್ಮ ದಿನಾಂಕ ದಾಖಲೆ ನೀಡಿ ಕೆಲಸ ಪಡೆದ ಆರೋಪದಡಿ ಸಬ್ಇನ್ಸ್ಪೆಕ್ಟರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಅಧಿಕಾರಿ ಎಸ್. ಟಿ. ಚಂದ್ರಶೇಖರ್ ನೀಡಿರುವ ದೂರಿನ ಮೇರೆಗೆ ಬ್ಯಾಡರಹಳ್ಳಿ ಠಾಣೆಯ ಪಿಎಸ್ಐ ಕಾಶಿಲಿಂಗೇಗೌಡ ಎಸ್. ಬಿ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಪಿಎಸ್ಐ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 30 ವರ್ಷ ಮೀರಿರಬಾರದು ಎಂದು ಸರ್ಕಾರದ ಅಧಿಸೂಚನೆಯಿದೆ. ಅರ್ಹ ಅಭ್ಯರ್ಥಿಯಲ್ಲದಿದ್ದರೂ ಸಹ ಕಾಶಿಲಿಂಗೇಗೌಡ ತಮ್ಮ ಜನ್ಮ ದಿನಾಂಕವನ್ನು 15/04/1988 ಎಂದು ನೀಡುವ ಮೂಲಕ 2017-18ರ ಸಾಲಿನ ಸಬ್ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿ, ನೇಮಕವಾಗಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ವಕೀಲರೊಬ್ಬರು ದೂರು ನೀಡಿದ್ದರು.
ಆ ದೂರಿನ ಮೇರೆಗೆ ಇಲಾಖೆಯ ಆಂತರಿಕ ತನಿಖೆ ನಡೆಸಿದಾಗ ಕಾಶಿಲಿಂಗೇಗೌಡ ಅವರ ಜನ್ಮ ದಿನಾಂಕ 15/04/1987 ಆಗಿದ್ದು, ಅಂಗನವಾಡಿಯ ಸಹಾಯಕಿಯ ನೆರವಿನೊಂದಿಗೆ ಚುಚ್ಚುಮದ್ದಿನ ರಿಜಿಸ್ಟರ್ ಪುಸ್ತಕದಲ್ಲಿ ನಕಲಿ ಜನ್ಮ ದಿನಾಂಕ ನಮೂದಿಸಿರುತ್ತಾರೆ. ನಂತರ ಮನೆಯಲ್ಲಿ ತಾಯಿ ಕಾರ್ಡ್ ಸಿಕ್ಕಿರುತ್ತದೆ. ಅದರಲ್ಲಿ ತಾನು ಹುಟ್ಟಿರುವುದು 1988ನೇ ಇಸವಿ ಎಂದು ನಕಲಿ ದಾಖಲೆಯನ್ನು ಸೃಷ್ಟಿಸಿ ಆ ದಾಖಲೆಗಳನ್ನ 2017ರ ಜೂನ್‌ನಲ್ಲಿ ಕುಣಿಗಲ್ ನ್ಯಾಯಾಲಯಕ್ಕೆ ಸಲ್ಲಿಸಿ ತಿದ್ದುಪಡಿ ಆದೇಶ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಹಾಸನ: ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಆರೋಪಿ ಪೊಲೀಸ್ ವಶಕ್ಕೆ