ಬೆಂಗಳೂರು: ರಾಜ್ಯದ ಏಳನೇ ವೇತನ ಆಯೋಗ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ವೇತನ ಪರಿಷ್ಕರಣೆಯ ಅಂತಿಮ ವರದಿಯನ್ನು ಸಲ್ಲಿಸಿತು.
ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಅಧ್ಯಕ್ಷತೆಯ ರಾಜ್ಯದ ಏಳನೇ ವೇತನ ಆಯೋಗ ವರದಿ ಸಲ್ಲಿಸಿತು. ಆಯೋಗದ ಸದಸ್ಯರಾದ ಪಿ.ಬಿ. ರಾಮಮೂರ್ತಿ, ಶ್ರೀಕಾಂತ್ ವನಹಳ್ಳಿ, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕಾ ಡಾ.ಕೆ.ವಿ. ತ್ರಿಲೋಕಚಂದ್ರ, ಹಣಕಾಸು ಇಲಾಖೆ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ವೇತನ ಆಯೋಗದ ಸದಸ್ಯ ಕಾರ್ಯದರ್ಶಿ ಹೆಫ್ಸಿಬಾರಾಣಿ ಕೊರ್ಲಪಾಟಿ ಉಪಸ್ಥಿತರಿದ್ದರು.
ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ತೀರ್ಮಾನ: ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ವರದಿಯನ್ನು ಆರ್ಥಿಕ ಇಲಾಖೆಯವರು ಪರಿಶೀಲನೆ ಮಾಡಬೇಕು. ಮೂಲ ವೇತನದ ಮೇಲೆ ಶೇ.27.5 ರಷ್ಟು ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿದ್ದಾರೆ. ಇಂದು 7ನೇ ವೇತನ ಆಯೋಗದ ವರದಿ ಸಲ್ಲಿಕೆ ಮಾಡಿದ್ದಾರೆ. ಸರ್ಕಾರ ಮಧ್ಯಂತರ ವರದಿಯಂತೆ ಶೇ.17 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಬಳಿಕ ಮೂರು ತಿಂಗಳ ಅವಧಿ ವಿಸ್ತರಣೆ ಮಾಡಿತ್ತು. 15/3/2024ಕ್ಕೆ ಅವರ ಅವಧಿ ಮುಗಿದಿದೆ. ನಿನ್ನೆ ಮೈಸೂರಿನಲ್ಲಿ ಇದ್ದಿದ್ದರಿಂದ ವರದಿ ಇಂದು ಪಡೆದಿದ್ದೇವೆ. ಅಂತಿಮ ವರದಿ ನೀಡಿದ್ದಾರೆ ಎಂದರು.
ವರದಿ ಸ್ವೀಕರಿಸಿ ಆರ್ಥಿಕ ಇಲಾಖೆಯವರು ಪರಿಶೀಲನೆ ನಡೆಸಿ ಏನು ಸಲಹೆ ಕೊಡ್ತಾರೆ. ಅದರ ಮೇಲೆ ತೀರ್ಮಾನ ಮಾಡ್ತೀವಿ. ಕನಿಷ್ಠ ಮೂಲ ವೇತನ 17,000 ದಿಂದ 27,000 ರೂ.ಕ್ಕೆ ಪರಿಷ್ಕರಣೆ ಆಗುವಂತೆ ಶಿಫಾರಸ್ಸು ಮಾಡಿದ್ದಾರೆ. ಆರ್ಥಿಕ ಇಲಾಖೆಯ ಪರಿಶೀಲನೆ ಬಳಿಕ ನಾವು ತೀರ್ಮಾನ ಮಾಡುತ್ತೇವೆ. ಚುನಾವಣಾ ಆಯೋಗ ಇಂದು 3 ಗಂಟೆಗೆ ಸುದ್ದಿಗೋಷ್ಠಿ ಮಾಡ್ತಾರೆ. ಏನು ಹೇಳ್ತಾರೊ ಗೊತ್ತಿಲ್ಲ. ಮಧ್ಯಂತರ ವರದಿಯ ಶೇ.17ರಷ್ಟು ವೇತನ ಹೆಚ್ಚಳ ಮುಂದುವರೆಯಲಿದೆ. ಸುಧಾಕರ್ ರಾವ್ ಆಯೋಗ ಶೇ.27.5 ರಷ್ಟು ಹೆಚ್ಚಳ ಶಿಫಾರಸ್ಸು ಮಾಡಿದ್ದಾರೆ. ಆರ್ಥಿಕ ಇಲಾಖೆಯ ಪರಿಶೀಲನೆ ಬಳಿಕ ಅವರ ಸಲಹೆಯಂತೆ ಮುಂದಿನ ತೀರ್ಮಾನ ಮಾಡುತ್ತೇವೆ ಎಂದರು.
ಇದನ್ನೂ ಓದಿ: 7ನೇ ವೇತನ ಆಯೋಗದ ಅಂತಿಮ ವರದಿ ಬಂದ ನಂತರ ತೀರ್ಮಾನ: ಸಿಎಂ ಸಿದ್ದರಾಮಯ್ಯ