ಬೆಳಗಾವಿ: ಸುವರ್ಣ ವಿಧಾನಸೌಧ ಮುಂಭಾಗದ ಹಲಗಾ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ತಡೆದು ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸಿದ್ದು, ಈ ವೇಳೆ ಎರಡು ಸರ್ಕಾರಿ ಬಸ್ಸುಗಳು ಪ್ರತಿಭಟನಾಕಾರರನ್ನು ದಾಟಿ ಮುಂದೆ ಬಂದವು. ಆಗ ಓಡಿ ಬಂದು ಬಸ್ ಅಡ್ಡಗಟ್ಡಿದ ರೈತರು, ಹಸಿರು ಟವಲುಗಳಿಂದ ಬಸ್ ಚಾಲಕರ ಕೈ ಮತ್ತು ಸ್ಟೇರಿಂಗ್ ಕಟ್ಟಿ ಹಾಕಿದ ಘಟನೆ ನಡೆಯಿತು.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಕಬ್ಬಿಗೆ ಸೂಕ್ತ ದರ ನಿಗದಿ, ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವುದು, ಕಳಸಾ - ಬಂಡೂರಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಮುಖಂಡರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಅಧಿವೇಶನದ ಮೊದಲ ದಿನವೇ ರೈತರು ತೀವ್ರ ಸ್ವರೂಪದ ಹೋರಾಟಕ್ಕೆ ಇಳಿದಿದ್ದು, ಅವರನ್ನು ಚದುರಿಸಲು ಪೊಲೀಸರು ಮುಂದಾದರು. ಆಗ ರೈತರು ಮತ್ತು ಪೊಲೀಸರ ಮಧ್ಯೆ ತೀವ್ರ ವಾಗ್ವಾದ ನಡೆಯಿತು.
ಇದೇ ವೇಳೆ ಎರಡು ಬಸ್ಸುಗಳನ್ನು ಚಾಲಕರು ಪಕ್ಕದಲ್ಲಿ ದಾಟಿಸಿಕೊಂಡು ಮುಂದೆ ಬಂದರು. ಇದರಿಂದ ಆಕ್ರೋಶಗೊಂಡ ರೈತರು ಬೆನ್ನಟ್ಟಿ ಬಂದು ಬಸ್ ಅಡ್ಡಗಟ್ಟಿದರು. ಒಳಗೆ ಹತ್ತಿ ಬಸ್ ಚಾಲಕರ ಕೈ ಮತ್ತು ಸ್ಟೇರಿಂಗ್ ಅನ್ನು ಹಸಿರು ಟವಲ್ನಿಂದ ಕಟ್ಟಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಮಹಾಮೇಳಾವ್ಗೆ ಮುಂದಾದ ಎಂಇಎಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ