ಹಾವೇರಿ: ಜಿಲ್ಲೆಯ ಹಲವು ರೈತರು ಸಾಂಪ್ರದಾಯಿಕ ಬೆಳೆಗಳಿಗೆ ವಿದಾಯ ಹೇಳಿ ತೋಟಗಾರಿಕಾ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಅಂತಹ ರೈತರಲ್ಲೊಬ್ಬರು ರಾಣೆಬೆನ್ನೂರು ತಾಲೂಕಿನ ಸುಣಕಲಬಿದರಿ ಗ್ರಾಮದ ಮಂಜಪ್ಪ ಸಿರಿಗೆರೆ.
ಮಂಜಪ್ಪ ಸಿರಿಗೆರೆ ಕಳೆದ ಹಲವು ವರ್ಷಗಳಿಂದ ಮೆಕ್ಕೆಜೋಳ, ಹತ್ತಿ, ಉಳ್ಳಾಗಡ್ಡಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ, ಪ್ರತಿವರ್ಷ ಬಿತ್ತುವುದು, ಕ್ರಿಮಿನಾಶಕ ಸಿಂಪಡಣೆ, ಕೂಲಿ ಕಾರ್ಮಿಕರ ಅಲಭ್ಯತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಅನುಭವಿಸಿ ಹೈರಾಣಾಗಿದ್ದರು. ಇದರಿಂದಾಗಿ ತೋಟಗಾರಿಕಾ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ. ತಮಗಿದ್ದ ಒಂದು ಎಕರೆ ಜಮೀನಿನಲ್ಲಿ ವಿಜಯಪುರದಿಂದ ಥೈವಾನ್ ಪಿಂಕ್ ಜಾತಿಯ ಪೇರಲ ಸಸಿ ತಂದು ನಾಟಿ ಮಾಡಿದ್ದಾರೆ.
ಸುಮಾರು 500 ಸಸಿಗಳನ್ನು ನಾಟಿ ಮಾಡಿದ್ದರಿಂದ ವರ್ಷಕ್ಕೆ ಫಸಲು ಬಿಡಲಾರಂಭಿಸಿವೆ. ಪ್ರಸ್ತುತ ಎರಡನೇ ವರ್ಷದಲ್ಲಿರುವ ಈ ಸಸಿಗಳು ಆಳೆತ್ತರ ಬೆಳೆದಿವೆ. ಗಿಡಗಳ ತೆಂಬಾ ಹಣ್ಣುಗಳನ್ನೂ ಬಿಟ್ಟಿವೆ. ಮಂಜಪ್ಪ ತಿಪ್ಪೆಗೊಬ್ಬರದಿಂದ ಕೃಷಿ ಮಾಡುತ್ತಿದ್ದಾರೆ.
ಪೇರಲ ಹಣ್ಣಿಗೆ ಗ್ರಾಹಕರಿಂದ ಹೆಚ್ಚೆಚ್ಚು ಬೇಡಿಕೆ ಬರುತ್ತಿದೆ. ವರ್ತಕರೇ ನೇರವಾಗಿ ಇವರ ತೋಟಕ್ಕೆ ಬಂದು ಹಣ್ಣು ಕಟಾವ್ ಮಾಡಿಕೊಂಡು ಹೋಗುತ್ತಿದ್ದಾರೆ. ಒಂದು ಬಾಕ್ಸ್‌ಗೆ 600 ರೂಪಾಯಿಯಂತೆ ನೀಡುತ್ತಿದ್ದಾರೆ. ದಿನವೊಂದಕ್ಕೆ 10ರಿಂದ 12 ಬಾಕ್ಸ್ಗಳಷ್ಟು ಪೇರಲ ಹಣ್ಣುಗಳು ಬರುತ್ತಿವೆ. ಇದರಿಂದಾಗಿ ದಿನಕ್ಕೆ ಕನಿಷ್ಠ 7 ಸಾವಿರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ ಮಂಜಪ್ಪ.
ಥೈವಾನ್ ಪಿಂಕ್ ಪೇರಲ ಗಿಡಗಳು ವರ್ಷಪೂರ್ತಿ ಫಸಲು ಬಿಡುವುದರಿಂದ ಒಳ್ಳೆಯ ಆದಾಯ ಬರುತ್ತಿದೆ. ಮಂಜಪ್ಪ ಒಂದೆಕರೆ ಜಮೀನಿನಲ್ಲಿ 500 ಪೇರಲ ಗಿಡ ನೆಡುವುದಕ್ಕೆ 50 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಸರ್ಕಾರದ ಯಾವುದೇ ಯೋಜನೆಗಳ ಸಹಾಯ ಪಡೆದಿಲ್ಲ. ಪೇರಲ ತೋಟದ ಮತ್ತೊಂದು ವಿಶೇಷತೆ ಅಂದರೆ ಇವರು ಹನಿ ನೀರಾವರಿ ಬದಲು ಕಾಲುವೆಗಳ ಮೂಲಕ ನೀರು ಹಾಯಿಸುತ್ತಿದ್ದಾರೆ. ಇದರಿಂದ ಗಿಡದ ಬೇರುಗಳಿಗೆ ಸಂಪೂರ್ಣ ನೀರು ಸಿಗುತ್ತಿದೆ.
''ಪೇರಲ ತೋಟದಲ್ಲಿ ಎಕರೆಗೆ ಒಂದರಂತೆ ಸೋಲಾರ್ ಟ್ರ್ಯಾಪ್ ಹಾಕಿದ್ದೇನೆ. ರಾತ್ರಿ ವೇಳೆ ಕ್ರಿಮಿ-ಕೀಟಗಳು, ಸಣ್ಣ ಹುಳುಗಳು ಕೃಷಿಗೆ ಹಾನಿ ಮಾಡಲೆತ್ನಿಸಿ ಈ ಟ್ರ್ಯಾಪ್‌ನಲ್ಲಿ ಬೀಳುತ್ತವೆ. ಇದರಿಂದ ತೋಟ ಯಾವುದೇ ರೋಗ ರುಜಿನಗಳ ಅಪಾಯ ಇಲ್ಲ. ಜನರು ಮತ್ತು ಪ್ರಾಣಿಗಳ ಕಾಟ ತಪ್ಪಿಸಲು ಸೋಲಾರ್ ತಂತಿ ಬೇಲಿ ಹಾಕಿದ್ದೇನೆ. ಒಂದು ಗಿಡ ಸುಮಾರು ಎರಡು ನೂರಕ್ಕೂ ಅಧಿಕ ಕಾಯಿಗಳನ್ನು ಬಿಡುತ್ತಿದೆ. ವರ್ಷಪೂರ್ತಿ ಇಳುವರಿ ಇರುವುದರಿಂದ ಆದಾಯವೂ ಇರುತ್ತದೆ'' ಎನ್ನುತ್ತಾರೆ ಮಂಜಪ್ಪ.
''ಮಂಜಪ್ಪರ ಜೊತೆಗೆ ಮಗ ಶಿವಾನಂದ ಸಹ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ತಂದೆ ಹಾಗು ಮಗ ತೋಟವನ್ನು ಕಸಕಡ್ಡಿಗಳಿಲ್ಲದಂತೆ ಸ್ವಚ್ಛವಾಗಿಟ್ಟುಕೊಂಡಿದ್ದಾರೆ. ಅಕ್ಕಪಕ್ಕದ ರೈತರೂ ಸಹ ಇವರ ಬೆಳೆ ಕಂಡು ತಾವೂ ಸಹ ಈ ರೀತಿ ತೋಟ ಮಾಡುವ ಆಸೆ ವ್ಯಕ್ತಪಡಿಸುತ್ತಿದ್ದಾರೆ.
ಥೈವಾನ್ ಪಿಂಕ್ ತಳಿಯ ಪೇರಲಹಣ್ಣಿನಲ್ಲಿ ಅತಿಹೆಚ್ಚು ಫೈಬರ್ ಅಂಶವಿರುವ ಕಾರಣ ಜೀರ್ಣಶಕ್ತಿ ಅಧಿಕ. ಕ್ಯಾನ್ಸರ್ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ಇದು ನಿಯಂತ್ರಿಸುತ್ತದೆ. ವಿಟಮಿನ್ ಸಿ ಇರುವ ಕಾರಣ ತ್ವಚೆ ಆರೋಗ್ಯಪೂರ್ಣವಾಗಿರುತ್ತದೆ'' ಎಂದು ಮಂಜಪ್ಪ ಅವರ ಸಹೋದರ ಶಿವಾನಂದ ಸಿರಿಗೆರೆ ವಿವರಿಸಿದರು.
ಇದನ್ನೂ ಓದಿ: ವಿಜಯಪುರ: ಪೇರಲ ಹಣ್ಣು ಬೆಳೆದು ಬದುಕು ರೂಪಿಸಿಕೊಂಡ ರೈತ ದಂಪತಿ