ಬೆಂಗಳೂರು: ಅಧಿಕಾರ ದುರುಪಯೋಗ ಮತ್ತು ಸುಲಿಗೆ ಆರೋಪದಲ್ಲಿ ಹೆಚ್ಚುವರಿ ಪೊಲೀಸ್ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಇತರ 9 ಅಧಿಕಾರಿಗಳ ವಿರುದ್ಧ ಲೊಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಆದರೆ, ಆರೋಪಿತ ಅರ್ಜಿದಾರ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುವುದಕ್ಕಾಗಿ ಸಕ್ಷಮ ಪ್ರಾಧಿಕಾರ ಅನುಮತಿ ನೀಡಿದಲ್ಲಿ ವಿಚಾರಣಾ ಪ್ರಕ್ರಿಯೆ ಮುಂದುವರೆಸಬಹುದಾಗಿದೆ ಎಂದು ಪೀಠ ಹೇಳಿದೆ. ಪ್ರಕರಣ ಸಂಬಂಧ ಪೂರ್ವಾನುಮತಿ ಪಡೆಯದೇ ತಮ್ಮ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡಿದ್ದ ಲೋಕಾಯುಕ್ತ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಎಂ.ಕೆ.ತಿಮ್ಮಯ್ಯ, ಸೀಮಂತ್‌ಕುಮಾರ್ ಸಿಂಗ್ ಸೇರಿ ಏಳು ಮಂದಿ ಅಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ವಿಶೇಷ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿರುವ ಕ್ರಮವನ್ನು ಮಾತ್ರ ರದ್ದುಪಡಿಸಿದೆ. ಆದರೆ, ದೂರು ರದ್ದುಪಡಿಸಲು ನಿರಾಕರಿಸಿದೆ.
ಅಲ್ಲದೆ, ಅರ್ಜಿದಾರರ ವಿರುದ್ಧದ ಆರೋಪಗಳು ಅಧಿಕೃತ ಕರ್ತವ್ಯ ವ್ಯಾಪ್ತಿಗೆ ಒಳಪಡುವುದಿಲ್ಲ. ಆದ ಕಾರಣ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಪಡೆಯಬೇಕಾದ ಅಗತ್ಯವಿಲ್ಲ ಎಂದು ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದರೆ, ತಪ್ಪಿತಸ್ಥ ಅಧಿಕಾರಿಗಳು ಅಧಿಕೃತವಾಗಿ ಸರ್ಚ್ ವಾರಂಟ್ ಪಡೆದು ದೂರುದಾರರ ಮನೆ ಪರಿಶೀಲನೆ ನಡೆಸಿದ್ದಾರೆ. ಈ ಅಂಶ ಅಧಿಕೃತ ಕರ್ತವ್ಯದ ಭಾಗವಾಗಿದೆ. ಆದ್ದರಿಂದ ಅಧಿಕೃತ ಕರ್ತವ್ಯದ ಭಾಗವಾಗಿರುವುದರಿಂದ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ನಿವೇಶನಗಳ ಹಂಚಿಕೆಯಲ್ಲಿ ಅಕ್ರಮಗಳು ನಡೆದಿರುವುದಕ್ಕೆ ಸಂಬಂಧಿಸಿದಂತೆ ಅಪರಿಚಿತ ಅಧಿಕಾರಿಗಳು, ದೂರುದಾರ ಆರ್‌ಟಿ ನಗರದ ಮೋಹನ್ ಕುಮಾರ್ ಸೇರಿದಂತೆ ವಿವಿಧ ಖಾಸಗಿ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ 2021ರ ನವೆಂಬರ್ ತಿಂಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ದೂರು ನೀಡಿತ್ತು. ಈ ಸಂಬಂಧ ಬಿಡಿಎ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು (ಸೀಮಂತ್ ಕುಮಾರ್ ತಂಡ) ಪರಿಶೀಲನೆ ನಡೆಸಿ, ದೂರುದಾರರ ಹೆಸರು ಸೇರಿದಂತೆ ಇತರರ ಹೆಸರಿದ್ದ ದಿನಚರಿ ಪುಸ್ತಕವನ್ನು ವಶಪಡಿಸಿಕೊಂಡಿದ್ದರು.
ದೂರುದಾರರ ವಿರುದ್ಧದ ಪ್ರಕರಣ ರದ್ದುಗೊಳಿಸಿದ್ದ ಹೈಕೋರ್ಟ್: ತನಿಖೆ ಮುಂದುವರೆಸಿದ್ದ ಎಸಿಬಿ ಅಧಿಕಾರಿಗಳು ನ್ಯಾಯಾಲಯದಿಂದ ಅನುಮತಿ ಪಡೆದು ಮೋಹನ್ ಕುಮಾರ್ ಮನೆ ಶೋಧ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಆದರೆ, ಅವರ ವಿರುದ್ಧ ಯಾವುದೇ ದೋಷಾರೋಪ ಮಾಡುವಂತಹ ವಸ್ತುಗಳು ಲಭ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಯಾವುದೇ ದೋಷಾರೋಪಣೆ ಇಲ್ಲದ ಪರಿಣಾಮ ಪ್ರಕರಣ ರದ್ದುಗೊಳಿಸಬೇಕು ಎಂದು ಮೋಹನ್ ಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅದರ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಗೊಳಿಸಿತ್ತು. ಅಲ್ಲದೇ, ಮೋಹನ್ ಕುಮಾರ್ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಾದಲ್ಲಿ ವಿಚಾರಣೆ ಪುನಾರಂಭಿಸಬಹುದು ಎಂದು ತಿಳಿಸಿತ್ತು. ಈ ನಡುವೆ ಅರ್ಜಿದಾರ ಅಧಿಕಾರಿಗಳು ಭಷ್ಟಾಚಾರ ನಿಗ್ರಹ ದಳ(ಎಸಿಬಿ)ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂರ್ದದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅವರ ವಿರುದ್ಧ ತನಿಖೆಗೆ ಅನುಮತಿ ನೀಡಬೇಕು ಎಂದು ಕೋರಿ ಮೋಹನ್ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ಅನುಮತಿ ಲಭ್ಯವಾಗದಿದ್ದರೂ ಅರ್ಜಿದಾರ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಅರ್ಜಿದಾರ ಅಧಿಕಾರಿಗಳ ವಿರುದ್ಧ ಅಧಿಕಾರ ದುರ್ಬಳಕೆ, ಕ್ರಿಮಿನಲ್ ದುರ್ನಡತೆ, ಸುಲಿಗೆ ಯತ್ನ, ಮತ್ತು ನಕಲಿ ದಾಖಲೆಗಳ ಸೃಷ್ಟಿ ಆರೋಪದಲ್ಲಿ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಎಸಿಬಿಯ ಡಿಎಸ್‌ಪಿಗಳಾದ ಎಂ.ಕೆ.ತಿಮ್ಮಯ್ಯ, ಪ್ರಕಾಶ್ ಆರ್, ಹೆಚ್.ವಿಜಯಾ, ಉಮಾ ಪ್ರಶಾಂತ್, ಪೋಲಿಸ್ ಇನ್ಸ್ಪೆಕ್ಟರ್ ಎಸ್.ಆರ್.ವೀರೇಂದ್ರ ಪ್ರಸಾದ್ ಹಾಗೂ ಮಂಜುನಾಥ್ ಜಿ. ಹೂಗಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲರು, ''ಪೂರ್ವಾನುಮತಿ ಪಡೆಯದೇ, ತಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ವಿಶೇಷ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿದೆ. ಇದು ಕಾನೂನು ಬಾಹಿರವಾಗಿದ್ದು, ಪ್ರಕರಣ ರದ್ದುಗೊಳಿಸಬೇಕು'' ಎಂದು ಅಧಿಕಾರಿಗಳು ಹೈಕೋರ್ಟ್‌ಗೆ ಮನವಿ ಮಾಡಿದ್ದರು.
ಇದನ್ನೂ ಓದಿ: ಪುರುಷನೊಂದಿಗೆ 10 ವರ್ಷ ಸಂಬಂಧದಲ್ಲಿದ್ದು 'ಅತ್ಯಾಚಾರ' ಎಂದ ಮಹಿಳೆಯ ಪ್ರಕರಣ ರದ್ದು - MP High Court Junks Rape Case