ರಾಮನಗರ: ಕಾಡಾನೆಗಳ ಚಲನವಲನ ವೀಕ್ಷಿಸಲು ಅರಣ್ಯ ಇಲಾಖೆ ಇದೀಗ ಡ್ರೋನ್ ತಂತ್ರಜ್ಞಾನದ ಮೊರೆ ಹೋಗಿದೆ. ಕಾಡಾನೆಗಳ ದಾಳಿಯಿಂದಾಗಿ ಪ್ರತೀ ವರ್ಷ ಸಾವಿರಾರು ಎಕರೆ ಬೆಳೆ ನಾಶವಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರಲ್ಲಿ ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕಲ್ಪನೆ ಮೂಡಿದೆ. ಈ ಕುರಿತು ಅವರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಹಲವು ಖಾಸಗಿ ಸಂಸ್ಥೆಗಳ ಜೊತೆಗೂಡಿ ಚರ್ಚಿಸಿದ್ದಾರೆ.
ಸಿಎಸ್‌ಆರ್ ಅನುದಾನ ಬಳಸಿಕೊಂಡು ಡ್ರೋನ್ ತಂತ್ರಜ್ಞಾನದ ಮೂಲಕ ಕಾಡಾನೆಗಳ ದಾಳಿ ನಿಯಂತ್ರಿಸಲು ಕಾರ್ಯ ರೂಪಿಸಲಾಗಿತ್ತು. ಇದೀಗ ಪ್ರಾಯೋಗಿಕವಾಗಿ ಕೋಡಿಹಳ್ಳಿ ಬಳಿಯ ಬೊಮ್ಮಸಂದ್ರ ವ್ಯಾಪ್ತಿಯಲ್ಲಿ ಸುಮಾರು 25 ಆನೆಗಳ ಹಿಂಡು ಕಾಡಿನಿಂದ ಹೊರಬರುತ್ತಿರುವುದನ್ನು ಡ್ರೋನ್ ಮೂಲಕ ಗುರುತಿಸಿ, ಅವುಗಳನ್ನು ಪುನಃ ಕಾಡಿಗಟ್ಟಲಾಗಿದೆ.
ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದೆ. ವಿಶೇಷವಾಗಿ ಬನ್ನೇರುಘಟ್ಟ, ಕೋಡಿಹಳ್ಳಿ, ಸಾತನೂರು, ಮಾಗಡಿ, ಚನ್ನಪಟ್ಟಣ ಮುಂತಾದ ಅನೇಕ ಪ್ರದೇಶಗಳಲ್ಲಿ ಸಾಕಷ್ಟು ಬೆಳೆ ಹಾನಿಯ ಜೊತೆಗೆ ಆನೆ ದಾಳಿಯಿಂದಾಗಿ ಕೆಲವೆಡೆ ಸಾವೂ ಸಂಭವಿಸಿದೆ.
ಇದನ್ನೂ ಓದಿ : ರೈಲಿಗೆ ಸಿಲುಕಿ ಸಾಯುವ ಆನೆಗಳ ರಕ್ಷಣೆಗೆ ಹೊಸ ಪ್ಲಾನ್: ಹಗಲು-ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಅಲರ್ಟ್