ಬೆಂಗಳೂರು : ಮದ್ಯಸೇವಿಸಿ ವಾಹನ ಚಲಾಯಿಸುವವರನ್ನ ಗಂಭೀರವಾಗಿ ಪರಿಗಣಿಸಿರುವ ನಗರ ಸಂಚಾರ ಪೊಲೀಸರು ಕಳೆದ ಆರು ತಿಂಗಳಲ್ಲಿ 6283 ಪ್ರಕರಣ ದಾಖಲಿಸಿಕೊಂಡಿದ್ದು, ಈ ಪೈಕಿ 1263 ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಿಸಿದ್ದಾರೆ.
ಪಾನಮತ್ತರಾಗಿ ವಾಹನ ಚಲಾಯಿಸಬೇಡಿ ಎಂದು ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ ಕ್ಯಾರೆ ಅನ್ನದ ಸವಾರರು ಕುಡಿದು ವಾಹನ ಚಲಾಯಿಸಿ ಸಾವು-ನೋವುಗಳಿಗೆ ಕಾರಣರಾಗುತ್ತಿದ್ದಾರೆ.
ಮದ್ಯಸೇವಿಸಿ ಸಿಕ್ಕಿಬಿದ್ದರೆ ವಾಹನ ಪರವಾನಗಿ ರದ್ದು ಮಾಡುವುದಾಗಿ ಸಂಚಾರ ಪೊಲೀಸರು ಖಡಕ್ ವಾರ್ನ್ ಮಾಡಿದ್ದರು. 1847 ಮಂದಿ ವಾಹನ ಪರವಾನಗಿ ಪರಿಶೀಲನೆಯಲ್ಲಿದೆ. ಕಳೆದ ವರ್ಷ ದಾಖಲಾಗಿದ್ದ ಒಟ್ಟು 7053 ಡ್ರಂಕ್ ಅಂಡ್ ಡ್ರೈವ್ ಕೇಸ್ಗಳಲ್ಲಿ 1381 ಸವಾರರ ಪರವಾನಗಿಯನ್ನ ಸಂಚಾರ ಪೊಲೀಸರು ರದ್ದು ಮಾಡಿದ್ದರು.
ಇನ್ನು ವ್ಹೀಲಿಂಗ್ ಮಾಡುವುದು ಅಪಾಯಕಾರಿ ಎಂದು ತಿಳಿದಿದ್ದರೂ ವ್ಹೀಲಿಂಗ್ ಸವಾರರ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ಅಪ್ರಾಪ್ತರ ಕೈಗೆ ದ್ವಿಚಕ್ರ ವಾಹನ ನೀಡಿ ಪೋಷಕರು ಹಾಗೂ ಮಾಲೀಕರು ಅವಾಂತರಗಳಿಗೆ ಕಾರಣರಾಗುತ್ತಿದ್ದಾರೆ.
ಇದಕ್ಕೆ ಬ್ರೇಕ್ ಹಾಕಲು ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದರೆ ದ್ವಿಚಕ್ರ ಮಾಲೀಕರ ಲೈಸೆನ್ಸ್ ಕ್ಯಾನ್ಸಲ್ ಮಾಡುವುದಾಗಿ ಸಂಚಾರ ಪೊಲೀಸರು ವಾರ್ನ್ ಮಾಡಿದ್ದರು. ಹೀಗಿದ್ದರೂ ವ್ಹೀಲಿಂಗ್ ಶೋಕಿಯ ಗೀಳಿನಿಂದ ಸಿಕ್ಕಿಬಿದ್ದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ವರ್ಷದ ಜೂನ್ ಅಂತ್ಯಕ್ಕೆ 225 ವ್ಹೀಲಿಂಗ್ ಪ್ರಕರಣ ದಾಖಲಿಸಿಕೊಂಡಿದ್ದು, ಈ ಪೈಕಿ ಆರ್ಸಿ ರದ್ದು ಕೋರಿ 93 ಪ್ರಕರಣಗಳಲ್ಲಿ 26 ಮಂದಿಯ ಆರ್ಸಿ ಅಮಾನತಿನಲ್ಲಿಡಲಾಗಿದೆ. ಇನ್ನೂ 67 ಪ್ರಕರಣಗಳಲ್ಲಿ ಆರ್ ಸಿ ಅಮಾನತು ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ 32 ಮಂದಿ ಸವಾರರ ಡಿಎಲ್ ರದ್ದತಿ ಕೋರಿ ಆರ್ಟಿಓಗೆ ಪತ್ರ ಬರೆಯಲಾಗಿತ್ತು. ಈ ಪೈಕಿ 9 ಮಂದಿ ಲೆಸೆನ್ಸ್ ರದ್ದುಗೊಳಿಸಿದರೆ 23 ಮಂದಿ ಸವಾರರ ಲೆಸೆನ್ಸ್ ಪರಿಶೀಲನೆ ಹಂತದಲ್ಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ನಗರದಲ್ಲಿ ಪದೇ ಪದೆ ಅಪಘಾತ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದವರ ವಾಹನಗಳ ಮಾಲೀಕರ ಮೇಲೆ ಟ್ರಾಫಿಕ್ ಪೊಲೀಸರು ಚಾಟಿ ಬೀಸಿದ್ದಾರೆ. ನಿರ್ಲಕ್ಷ್ಯ ಹಾಗೂ ಅಜಾಗರೂಕತೆ ಚಾಲನೆಯಿಂದ ಅಪಘಾತವೆಸಗಿ ಸಾವು-ನೋವುಗಳಿಗೆ ಕಾರಣರಾಗುತ್ತಿರುವವರ ಹಾಗೂ ಟ್ರಾಫಿಕ್ ವೈಯಲೇಷನ್ ಮಾಡುತ್ತಿರುವ ಸವಾರರ ಗುರಿಯಾಗಿಸಿಕೊಂಡು ನೋಟಿಸ್ ಕಳುಹಿಸಿ ದಂಡ ವಸೂಲಿ ಜೊತೆಗೆ ಪರವಾನಗಿ ರದ್ದು ಕೋರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಇದೇ ರೀತಿ ಕಳೆದ ಆರು ತಿಂಗಳಲ್ಲಿ ದಾಖಲಾಗಿದ್ದ 431 ಅಪಘಾತ ಪ್ರಕರಣಗಳಲ್ಲಿ ಡಿಎಲ್ ರದ್ದು ಕೋರಿ ಕಳುಹಿಸಲಾಗಿದ್ದ 258 ಪ್ರಕರಣಗಳ ಪೈಕಿ 95 ಮಂದಿ ಡಿಎಲ್ ಕ್ಯಾನ್ಸಲ್ ಮಾಡಲಾಗಿದೆ. ಬಾಕಿ 163 ಮಂದಿ ವಾಹನ ಪರವಾನಗಿ ರದ್ದತಿ ಬಗ್ಗೆ ಆರ್ಟಿಒ ಅಧಿಕಾರಿಗಳು ಪರಿಶೀಲಿಸುತ್ತಿರುವುದಾಗಿ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಡ್ರಂಕ್ ಅಂಡ್ ಡ್ರೈವ್, ವ್ಹೀಲಿಂಗ್ ಹಾಗೂ ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸಿ ಅಪಘಾತಕ್ಕೆ ಕಾರಣರಾಗುತ್ತಿರುವ ವಾಹನ ಚಾಲಕರ ಪರವಾನಗಿ ರದ್ದು ಕೋರಿ ಆರ್ಟಿಓ ಅಧಿಕಾರಿಗಳಿಗೆ ಪತ್ರ ಬರೆಯುವುದು ದಿನನಿತ್ಯ ಈ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇದರಂತೆ ಮೂರು ರೀತಿಯ ಅಪರಾಧಗಳಲ್ಲಿ ಒಟ್ಟು 1367 ವಾಹನ ಪರವಾನಗಿಯನ್ನ ಕಳೆದ ಆರು ತಿಂಗಳಲ್ಲಿ ರದ್ದು ಮಾಡಲಾಗಿದೆ. 2033 ಪ್ರಕರಣಗಳಲ್ಲಿ ಡಿಎಲ್ ರದ್ದು ಸಂಬಂಧ ಪರಿಶೀಲನೆ ಹಂತದಲ್ಲಿದೆ ಎಂದು ಸಂಚಾರ ಪೊಲೀಸ್ ಇಲಾಖೆಯು ನೀಡಿದ ಅಂಕಿ-ಅಂಶಗಳಲ್ಲಿ ತಿಳಿಸಿದೆ.