ಬೆಳಗಾವಿ : ಅಮೆರಿಕ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆಗೆ ನಾಂದಿ ಹಾಡಿದ್ದ, ಡೊನಾಲ್ಡ್ ಟ್ರಂಪ್ ಅತ್ಯಾಪ್ತರಲ್ಲಿ ಒಬ್ಬರಾಗಿದ್ದ ಬೆಳಗಾವಿ ಮೂಲದ ಖ್ಯಾತ ವೈದ್ಯ, ಮಹಾದಾನಿ ಡಾ. ಸಂಪತ್ಕುಮಾರ ಶಿವಣಗಿ ಅವರು ಇಂದು ಮುಂಜಾನೆ ವಯೋಸಹಜ ಕಾಯಿಲೆಯಿಂದ (ಅಮೆರಿಕದ ವೇಳೆಯಂತೆ ಸೋಮವಾರ ಫೆ.10ರ ರಾತ್ರಿ) ವಿಧಿವಶರಾಗಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಡಾ. ಸಂಪತ್ ಕುಮಾರ ಶಿವಣಗಿ ಅವರು ಕಳೆದ 45 ವರ್ಷಗಳಿಂದ ಅಮೆರಿಕದ ಮಿಸ್ಸಿಸಿಪ್ಪಿಯಲ್ಲಿ ನೆಲೆಸಿದ್ದರು. ಇಂದು ಅನಾರೋಗ್ಯದಿಂದ ಅಲ್ಲಿಯ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆಯು ಆರಂಭಿಸಿರುವ ಅತ್ಯಾಧುನಿಕ ಸೌಲಭ್ಯವುಳ್ಳ ಕ್ಯಾನ್ಸರ್ ಆಸ್ಪತ್ರೆಗೆ 8 ಕೋಟಿ ರೂಪಾಯಿ ದೇಣಿಗೆ ನೀಡುವ ಮೂಲಕ ಅವರು ಸುದ್ದಿಯಾಗಿದ್ದರು.
ಅಮೆರಿಕದ ಬಾಲ್ಟಿಮೋರ್ ಜಾನ್ಸ್ ಹಾಫ್ ಕಿನ್ಸ್ ವೈದ್ಯಕೀಯ ಸಂಸ್ಥೆಯಲ್ಲಿ ಫೆಲೋಶಿಪ್ ಮುಗಿಸಿದ್ದರು. ಬಳಿಕ ಸೇಂಟ್ ಲೂಯಿಸ್ನಲ್ಲಿರುವ ವಾಷಿಂಗ್ಟನ್ ಯುನಿವರ್ಸಿಟಿ ಆಫ್ ಅಲಾಬಾಮಾದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ವಿಕ್ಸಬರ್ಗ್ ಆಸ್ಪತ್ರೆಯಲ್ಲಿ ಗೈನಾಕಾಲಾಜಿಸ್ಟ್ ಆಗಿ ಸೇರಿಕೊಂಡ ಅವರು ಅಲ್ಲಿ ಕೈಗೊಂಡ ಶಸ್ತ್ರಚಿಕಿತ್ಸೆಗಳಿಂದ ಸಾಕಷ್ಟು ಮೆಚ್ಚುಗೆ ಪಡೆದಿದ್ದರು. ಅಮೆರಿಕದಲ್ಲೇ ವೈದ್ಯರಾಗಿ ಸಂಪತ್ ಕುಮಾರ ಪ್ರಸಿದ್ಧಿ ಪಡೆದಿದ್ದರು.
ಮಿಸ್ಸಿಸಿಪ್ಪಿ ಮಾನಸಿಕ ಆರೋಗ್ಯ ವಿಭಾಗದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 84 ವರ್ಷದ ಡಾ. ಸಂಪತ್ ಕುಮಾರ ಅವರು ಇಂದು ಮೃತರಾಗಿದ್ದಾರೆ. ಅವರ ಪತ್ನಿ ಡಾ. ಉದಯಾ ಅವರು 'ಸ್ಲಿಪ್ ಡಿಸಾರ್ಡರ್ ಸ್ಪೆಷಲಿಸ್ಟ್' ಆಗಿದ್ದು, ಪುತ್ರಿಯರಾದ ಪ್ರಿಯಾ ಮತ್ತು ಪೂಜಾ ಅವರು ಕೂಡ ಅಮೆರಿಕದ ಉನ್ನತ ಸ್ಥಾನಗಳಲ್ಲಿದ್ದಾರೆ.
ಅಮೆರಿಕದಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮೆರೆದಿದ್ದ ಡಾ. ಸಂಪತ್ ಕುಮಾರ ಅವರು, ಸದಾ ತಾಯ್ನಾಡಿಗೆ ಏನಾದರು ಮಾಡಬೇಕು ಎನ್ನುವ ತುಡಿತ ಹೊಂದಿದ್ದರು. ಜ.3 ರಂದು ಅವರ ಹೆಸರಿನಲ್ಲೇ ನಿರ್ಮಾಣಗೊಂಡ "ಕೆಎಲ್ಇ ಡಾ. ಸಂಪತ್ ಕುಮಾರ ಎಸ್. ಶಿವಣಗಿ ಕ್ಯಾನ್ಸರ್ ಆಸ್ಪತ್ರೆ"ಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದ್ದರು. ಅಥಣಿಯಲ್ಲಿ ಜ. 10 ರಂದು ಲೋಕಾರ್ಪಣೆಗೊಂಡ ಆಂಗ್ಲ ಮಾಧ್ಯಮ ಶಾಲೆಗೂ 1 ಕೋಟಿ ದೇಣಿಗೆ ನೀಡಿದ್ದರು.
ಡಾ. ಸಂಪತ್ ಕುಮಾರ ತಂದೆ ಸಿದ್ರಾಮಪ್ಪ, ತಾಯಿ ಬಸವ್ವ. ಅಥಣಿಯಲ್ಲಿ ಇವರದ್ದು ಆಗರ್ಭ ಶ್ರೀಮಂತ ಮನೆತನ, ಪ್ರಸಿದ್ಧ ಬಟ್ಟೆ ವ್ಯಾಪಾರಿಗಳು. ಅಥಣಿ ಪಟ್ಟಣದ ಹುಂಡೇಕಾರ್ ಕನ್ನಡ ಶಾಲೆಯಲ್ಲಿ 1-5ನೇ ತರಗತಿ, 6-7 ಸರ್ಕಾರಿ ಪಬ್ಲಿಕ್ ಶಾಲೆ, ಜೆಎ ಹೈಸ್ಕೂಲ್ನಲ್ಲಿ ಪ್ರೌಢಶಿಕ್ಷಣ ಪಡೆದಿದ್ದಾರೆ. ಬಳಿಕ ಬೆಳಗಾವಿ ಕೆಎಲ್ಇ ಸಂಸ್ಥೆಯ ಆರ್.ಎಲ್.ಎಸ್ ಕಾಲೇಜಿನಲ್ಲಿ ಹೆಚ್ಚಿನ ಅಂಕಗಳೊಂದಿಗೆ ಪಿಯುಸಿ ತೇರ್ಗಡೆಯಾಗಿದ್ದರು. ನಂತರ ಮಣಿಪಾಲ್ ಕಾಲೇಜಿನಲ್ಲಿ ಎಂಬಿಬಿಎಸ್, ಹುಬ್ಬಳ್ಳಿ ಕೆಎಂಸಿಯಲ್ಲಿ ಎಂಡಿ ಪೂರ್ಣಗೊಳಿಸಿದ್ದಾರೆ.
ಡಾ. ಸಂಪತ್ ಕುಮಾರ ಅಮೆರಿಕದ ಹಲವು ಅಧ್ಯಕ್ಷರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಾಪ್ತರಲ್ಲಿ ಇವರೂ ಒಬ್ಬರು. ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಗ್ಗಳಿಕೆ ಇವರದ್ದಾಗಿತ್ತು. ಈ ಕುರಿತು ಅಲ್ಲಿನ ಮಾಧ್ಯಮಗಳೇ ಸುದ್ದಿ ಪ್ರಕಟಿಸಿದ್ದವು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಅವರ ಜೊತೆಗೂ ಡಾ. ಸಂಪತ್ ಕುಮಾರ ಅತ್ಯುತ್ತಮ ಸಂಬಂಧ ಹೊಂದಿದ್ದರು.
ಗಡಿ ವಿವಾದ ಮುಂದಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ವಿರುದ್ಧ ಡಾ. ಸಂಪತ್ ಕುಮಾರ ಸಿಡಿದೆದ್ದಿದ್ದರು. ಹುಬ್ಬಳ್ಳಿ ಬಂದ್ ಮಾಡಿ ಬಿಸಿ ಮುಟ್ಟಿಸಿದ್ದರು. ಇದನ್ನ ಗಮನಿಸಿದ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ, ಎಸ್. ಆರ್ ಬೊಮ್ಮಾಯಿ, ಪಾಟೀಲ ಪುಟ್ಟಪ್ಪ ಅವರ ಮಾರ್ಗದರ್ಶನದಲ್ಲಿ ಡಾ. ಸಂಪತ್ ಕುಮಾರ ನೇತೃತ್ವದ ನಿಯೋಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಭೇಟಿಗೆ ತೆರಳಿತ್ತು.
ಘಟಾನುಘಟಿ ನಾಯಕರೇ ಉಕ್ಕಿನ ಮಹಿಳೆ ವಿರುದ್ಧ ನಿಂತು ಮಾತನಾಡಲು ಹೆದರುತ್ತಿದ್ದ ಸಂದರ್ಭದಲ್ಲಿ ಡಾ. ಸಂಪತ್ ಕುಮಾರ ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಅದಕ್ಕೂ ಮೊದಲು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಇಂದಿರಾ ಹೇಳಿದ್ದರು. ಮೇಡಂ ನೀವು ನಮ್ಮ ಅಹವಾಲು ಕೇಳಲೇಬೇಕು ಎಂದೇಳಿ ನಾನು ಮಾತಾಡಿದೆ. ಕನ್ನಡಿಗರನ್ನು ಹೇಡಿಗಳೆಂದು ದಯವಿಟ್ಟು ತಿಳಿಯಬೇಡಿ. ನಾವು ಮರ್ಯಾದೆ ಗೆರೆ ದಾಟಿಲ್ಲ. ಇದೇ ರೀತಿ ವರ್ತನೆ ನಮ್ಮ ವಿರುದ್ಧ ಮಹಾರಾಷ್ಟ್ರ ಮುಂದುವರಿಸಿದರೆ ನಾವೂ ತಕ್ಕ ಪಾಠ ಕಲಿಸಬೇಕಾಗುತ್ತದೆ. ನಾವು ಎಚ್ಚರಿಕೆ ಕೊಡಲು ನಿಮ್ಮ ಬಳಿ ಬಂದಿದ್ದೇವೆ ಎಂದೆ. ಇದರಿಂದ ಸಿಟ್ಟಿಗೆದ್ದ ಇಂದಿರಾ ಗಾಂಧಿ ಅವರು ನಿನ್ನನ್ನು ಜೈಲಿಗೆ ಕಳಿಸುತ್ತೇನೆ ಎಂದರು. ಅದಾದ ಬಳಿಕ ಸಾಕಷ್ಟು ಬದಲಾವಣೆ ಆಗಿದ್ದು, ಈಗ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿ ಉಳಿದಿದೆ. ಇದರಲ್ಲಿ ನನ್ನದೂ ಪಾತ್ರವಿದೆ ಎಂದು ಇತ್ತೀಚಿಗೆ ಬೆಳಗಾವಿಗೆ ಆಗಮಿಸಿದ್ದ ವೇಳೆ ಡಾ. ಸಂಪತ್ ಕುಮಾರ ಈಟಿವಿ ಭಾರತದ ಜೊತೆಗೆ ಮನಬಿಚ್ಚಿ ಮಾತನಾಡಿದ್ದರು.
ಡಾ. ಸಂಪತ್ ಕುಮಾರ ಶಿವಣಗಿ ಅವರು 2005-2008 ರವರೆಗೆ ಮೂರು ವರ್ಷ ಅಮೆರಿಕಾ ಸರ್ಕಾರದ ಆರೋಗ್ಯ ಮತ್ತು ಮಾನವಿಕ ಸೇವೆಗಳ ಕಾರ್ಯದರ್ಶಿ ಸಲಹೆಗಾರರಾಗಿದ್ದರು. ಅಮೆರಿಕಾದ ಭಾರತೀಯ ವೈದ್ಯರ ಸಂಘದ ಅಧ್ಯಕ್ಷರೂ ಆಗಿದ್ದಾರೆ. ಹೀಗೆ ಅನೇಕ ಜವಾಬ್ದಾರಿ ನಿರ್ವಹಿಸಿ ಅಮೆರಿಕಾದಲ್ಲಿ ಸೈ ಎನಿಸಿಕೊಂಡಿದ್ದರು. ಅಮೆರಿಕಾದ ಆರೋಗ್ಯ ಕ್ಷೇತ್ರಕ್ಕೆ ಅವರು ಅದ್ಭುತ ಕೊಡುಗೆ ನೀಡಿದ್ದರು. ಅಲ್ಲಿನ ಆರೋಗ್ಯ ಕ್ಷೇತ್ರ ಸುಧಾರಿಸುವ ಜೊತೆಗೆ ಹೊಸ ಯೋಜನೆಗಳಿಂದ ಬದಲಾವಣೆಯ ಗಾಳಿಯನ್ನೆ ಬೀಸಿದ್ದರು. ಅವರ ಕೊಡುಗೆಯನ್ನು ಗುರುತಿಸಿದ ಅಮೆರಿಕಾ ಸರ್ಕಾರವು ಮಿಸ್ಸಿಸಿಪ್ಪಿಯ ಒಂದು ರಸ್ತೆಗೆ "ಡಾ. ಸಂಪತ್ ಕುಮಾರ ಶಿವಣಗಿ ಲೇನ್" ಎಂದು ಹೆಸರಿಟ್ಟು ಗೌರವಿಸಿದ್ದರು.
"ಪ್ರವಾಸಿ ಭಾರತೀಯ ಸಮ್ಮಾನ್" ಪ್ರಶಸ್ತಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಡಾ. ಮನಮೋಹನ್ ಸಿಂಗ್ ಅವರಿಗೆ ಡಾ. ಶಿವಣಗಿ ಆಪ್ತರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿ ಅವರ ಸಂಪುಟದ ಹಲವು ಸಚಿವರ ಜೊತೆಗೂ ಉತ್ತಮ ಗೆಳೆತನ ಹೊಂದಿದ್ದರು. 2017ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಸರ್ಕಾರವು "ಪ್ರವಾಸಿ ಭಾರತೀಯ ಸಮ್ಮಾನ್" ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಪದ್ಮಶ್ರೀಗೆ ಸಮಾನವಾದ ಪ್ರಶಸ್ತಿ.
ಅಮೆರಿಕಾದಲ್ಲೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಅವರ ಜೀವನದ ಕುರಿತು ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್ ಅವರು, "ಅಮೆರಿಕದ ಭಾರತೀಯ ಸಾಂಸ್ಕೃತಿಕ ರಾಯಭಾರಿ" ಗ್ರಂಥ ರಚಿಸಿದ್ದಾರೆ. ಜಾರ್ಜ್ ಬುಷ್ ಅಧ್ಯಕ್ಷರಾಗಿದ್ದಾಗ ಅಮೆರಿಕದ ವೈಟ್ ಹೌಸ್ನಲ್ಲಿ ದೀಪಾವಳಿ ಹಬ್ಬ ಆಚರಿಸುವಲ್ಲಿ ಡಾ. ಶಿವಣಗಿ ಯಶಸ್ವಿಯಾಗಿದ್ದರು. ಇನ್ನು, ಜಾಕ್ ಸನ್ದಲ್ಲಿ ಹಿಂದೂ ದೇವಾಲಯವನ್ನು ಕಟ್ಟಿಸಿದ್ದರು.
ಅಮೆರಿಕ ನನ್ನ ಕರ್ಮಭೂಮಿ. ಆದರೆ, ಬೆಳಗಾವಿ ಜಿಲ್ಲೆಯ ಅಥಣಿ ನನ್ನ ಜನ್ಮಭೂಮಿ. ನನ್ನ ನರನಾಡಿಗಳಲ್ಲಿನ ಪ್ರತಿ ಕಣ ಕಣಗಳಲ್ಲಿ ನನ್ನ ತಾಯ್ನಾಡು ತುಂಬಿದೆ. ಭಾರತ ನನಗೆ ಹೃದಯವನ್ನು ಕೊಟ್ಟಿದೆ. ಅದಕ್ಕೆ ಪರ್ಯಾಯವಾಗಿ ನಾನು ನನ್ನ ಜೀವ ಕೊಡಲು ಸಿದ್ಧ ಎನ್ನುತ್ತಿದ್ದ ಡಾ. ಸಂಪತ್ ಕುಮಾರ್ ಈಟಿವಿ ಭಾರತ ಮುಂದೆ ತಾಯ್ನಾಡಿನ ಬಗೆಗಿನ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದರು.
ಡಾ. ಪ್ರಭಾಕರ ಕೋರೆ ಕಂಬನಿ : ಡಾ. ಸಂಪತ್ ಕುಮಾರ ಶಿವಣಗಿ ಅವರ ನಿಧನಕ್ಕೆ ಡಾ. ಪ್ರಭಾಕರ ಕೋರೆ ಕಂಬನಿ ಮಿಡಿದಿದ್ದಾರೆ. ಒಬ್ಬ ದಾನಿಯನ್ನು, ಹೃದಯವಂತ ವೈದ್ಯನನ್ನು ಕಳೆದುಕೊಂಡು ಸಮಾಜ ಬಡವಾಗಿದೆ. ಅವರ ಅಗಲಿಕೆ ನೋವು ತಂದಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಅವರ ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲೆಂದು ಅವರು ಕೋರಿದ್ದಾರೆ.