ಗಂಗಾವತಿ (ಕೊಪ್ಪಳ): ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ಒಂದು ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಟ್ಟ ಪರಿಣಾಮ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ತಾಲೂಕಿನ ಚಿಕ್ಕಜಂತಕಲ್ ಬಳಿ ಇರುವ 5 ದಶಕಕ್ಕೂ ಹಿಂದಿನ ಕಾಲದ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ಇದರಿಂದಾಗಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ನೇರ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.
ಹೀಗಾಗಿ, ಬಳ್ಳಾರಿಯಿಂದ ಗಂಗಾವತಿ ಅಥವಾ ಕೊಪ್ಪಳ ಜಿಲ್ಲೆಗೆ ತೆರಳಲು ವಾಹನ ಸವಾರರು, ಸಾರ್ವಜನಿಕರು ಹಾಗೂ ಪ್ರಯಾಣಿಕರು ಸುತ್ತು ಬಳಸಿ ಬರಬೇಕಾದ ಸ್ಥಿತಿ ಎದುರಾಗಿದೆ. ಬಳ್ಳಾರಿಯಿಂದ ಸಿರುಗುಪ್ಪಾ, ಸಿಂಧನೂರು ತಾಲೂಕಿನ ಮಾರ್ಗ ಇಲ್ಲವೇ ಬಳ್ಳಾರಿಯಿಂದ ಹೊಸಪೇಟೆ ತಾಲೂಕಿನ ಮೂಲಕ ಕೊಪ್ಪಳ ಮತ್ತು ಕಡೇಬಾಗಿಲು ಸೇತುವೆ ಮುಖಾಂತರ ಗಂಗಾವತಿಗೆ ಜನರು ತೆರಳಬೇಕಾದ ಅನಿವಾರ್ಯತೆ ಇದೆ.
ಸಂಜೆಯಿಂದ ಸಂಚಾರ ಸ್ಥಗಿತ: ನದಿಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದ್ದಂತೆ ಎಚ್ಚೆತ್ತ ಕಂಪ್ಲಿ ಹಾಗೂ ಗಂಗಾವತಿ ಗ್ರಾಮೀಣ ಪೊಲೀಸರು ಮಂಗಳವಾರ ಸಂಜೆಯಿಂದಲೇ ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುವ ವಾಹನಗಳ ಸಂಚಾರ ನಿಷೇಧಿಸಿದ್ದಾರೆ. ಬಳಿಕ ಮತ್ತಷ್ಟು ನೀರಿನ ಪ್ರಮಾಣ ಹೆಚ್ಚಳವಾದ ಕಾರಣ ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ. ಎರಡೂ ಕಡೆ ಬ್ಯಾರಿಕೇಡ್ಗಳನ್ನು ಇಟ್ಟು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ.
ಸೇತುವೆ ಶಿಥಿಲಾವಸ್ಥೆ: ಕಳೆದ ಐದು ದಶಕದ ಹಿಂದೆ ನಿರ್ಮಿಸಲಾದ ಕಂಪ್ಲಿ ಸೇತುವೆ ಈಗಾಗಲೇ ಶಿಥೀಲಾವಸ್ಥೆಯಲ್ಲಿದೆ. ಇದಕ್ಕೆ ಪರ್ಯಾಯ ಸೇತುವೆ ನಿರ್ಮಿಸಬೇಕು ಎಂಬ ಕೂಗು ಹಲವು ವರ್ಷಗಳಿಂದಲೂ ಗಂಗಾವತಿ ಹಾಗೂ ಕಂಪ್ಲಿ ಭಾಗದ ಜನರು ಆಗ್ರಹಿಸುತ್ತಿದ್ದಾರೆ. ಸುಮಾರು 800 ಮೀಟರ್ ಉದ್ದವಿರುವ ಈ ಸೇತುವೆಯ ಬಹುತೇಕ ಭಾಗ ದುರಸ್ತಿಯಲ್ಲಿದೆ. ನದಿಯಲ್ಲಿ ಪ್ರವಾಹ ಉಂಟಾದಾಗಲೊಮ್ಮೆ ಸೇತುವೆ ಮತ್ತಷ್ಟು ಶಿಥಿಲವಾಗುತ್ತಿದೆ. ಪ್ರವಾಹ ಇಳಿಮುಖವಾದಾಗ ಕಾಟಾಚಾರಕ್ಕೆ ಎಂಬಂತೆ ಅಧಿಕಾರಿಗಳು ದುರಸ್ತಿ ಕೈಗೊಳ್ಳುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಮಾರಕಗಳ ಮುಳಗಡೆ: ನದಿಯಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ತಾಲೂಕಿನ ಆನೆಗೊಂದಿ ಭಾಗದ ಐತಿಹಾಸಿಕ ಸ್ಮಾರಕಗಳು ಮುಳುಗಡೆಯಾಗಿವೆ. ಕೆಲ ಪ್ರದೇಶಕ್ಕೆ ಹೋಗದಂತೆ ಜಲದಿಗ್ಬಂಧನ ಉಂಟಾಗಿದೆ. 64 ಕಾಲಿನ ಮಂಟಪ, ಶ್ರೀಕೃಷ್ಣದೇವರಾಯನ ಸಮಾಧಿ, ವಿಧಿ-ವಿಧಾನಗಳನ್ನು ನಿರ್ವಹಿಸುವ ಮಂಟಪಗಳು ಜಲಾವೃತವಾಗಿವೆ.
ಚಿಂತಾಮಣಿ, ತುಂಗಭದ್ರಾ ನದಿ ಸ್ನಾನದ ಘಟ್ಟ ಸೇರಿದಂತೆ ನಾನಾ ಸ್ಮಾರಕಕ್ಕೆ ಸಂಪರ್ಕ ಕಡಿತವಾಗಿದೆ. ಅಲ್ಲದೇ, ಮಾಧ್ವಮತದ ಪ್ರಚಾರ 9 ಜನ ಯತಿಗಳ ಸಮಾಧಿಯಾಗಿರುವ ನವವೃಂದಾವನ ಗಡ್ಡೆಯ ಸಂಪರ್ಕ ಸಂಪೂರ್ಣ ಬಂದ್ ಆಗಿದೆ.
ಇದನ್ನೂ ಓದಿ: ರಾಯಚೂರು: ಕೃಷ್ಣಾ ನದಿಯಲ್ಲಿ ಉಕ್ಕಿ ಹರಿದ ನೀರು.. ಪ್ರವಾಹ ಭೀತಿ ಹೆಚ್ಚಳ - Increase flood risk in Raichur