ಮಂಗಳೂರು: ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ನಡೆದ ವಿಜಯೋತ್ಸವದ ಬಳಿಕ ಬೋಳಿಯಾರುವಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು, ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪದ ಪ್ರಶ್ನೆಯೇ ಬರುವುದಿಲ್ಲ. ಈಗಾಗಲೇ ಮೂವರ ಬಂಧನವಾಗಿದೆ. ನಿಷ್ಪಕ್ಷಪಾತವಾಗಿ ಕ್ರಮ ಆಗುತ್ತದೆ. ಅದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಘಟನೆಗೆ ಕಾರಣ ಏನೇ ಇರಬಹುದು. ಆದರೆ, ಕಾನೂನು ಕೈಗೆ ತೆಗೆದುಕೊಂಡಾಗ ಕ್ಷಮಿಸುವುದಕ್ಕೆ ಆಗುವುದಿಲ್ಲ. ಕೆಲವರು ಪ್ರಚೋದನೆ ಮಾಡಿರಬಹುದು. ಆದರೆ, ಸಂಯಮ ಕಾಪಾಡೋದು ನಮ್ಮ ಜವಾಬ್ದಾರಿ. ಕಾನೂನು ಕೈಗೆ ತೆಗೆದುಕೊಂಡವರ ಮೇಲೆ ಕಾನೂನು ಕ್ರಮ ಆಗಲೇಬೇಕು. ಇಂತಹ ಘಟನೆಗಳಾದಾಗ ಸರ್ಕಾರ, ರಾಜಕಾರಣಿಗಳು ತಟಸ್ಥವಾಗಿರಬೇಕು. ಆ ಕೆಲಸ ನಾವು ಮಾಡುತ್ತೇವೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ಗೆ ಸೋಲಾಗಿರುವ ಬಗ್ಗೆ ಮಾತನಾಡಿದ ಸಚಿವ ಗುಂಡೂರಾವ್, ಜಿಲ್ಲೆಯಲ್ಲಿ ನಾವು ಸೋತರೂ, ಸೋಲಿನ ಅಂತರ ಕಡಿಮೆಯಾಗಿದೆ. ನಾವಿಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ ಎಂದಿರಲಿಲ್ಲ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದ ಪರಿಸ್ಥಿತಿ ಬಗ್ಗೆ ಅರಿವಿದೆ. ನಮ್ಮ ಅಭ್ಯರ್ಥಿ ಪದ್ಮರಾಜ್ ಅವರು ಶ್ರಮ ಪಟ್ಟಿದ್ದಾರೆ. ಆದರೆ, ಇಲ್ಲಿ ಬಿಜೆಪಿ ಗೆಲ್ಲೋದಕ್ಕೆ ಕೋಮುವಾದವೇ ಕಾರಣ ಎಂದರು.
ಆದರೆ, ಕೇಂದ್ರದಲ್ಲಿ ಜನರು ಮೋದಿಯವರಿಗೆ ಪಾಠ ಕಲಿಸಿದ್ದಾರೆ. ಅವರು ಸರ್ವಾಧಿಕಾರಿ ರೀತಿ ಹೋಗುತ್ತೇವೆ ಅಂದಿದ್ದಕ್ಕೆ ಕಡಿವಾಣ ಬಿದ್ದಿದೆ. ಇನ್ನು ಸರ್ವಾಧಿಕಾರಿ ಧೋರಣೆ ಅನುಸರಿಸುವುದಕ್ಕೆ ಆಗುವುದಿಲ್ಲ. ಪ್ರಜಾಪ್ರಭುತ್ವ ಉಳಿಸುವ ಫಲಿತಾಂಶವನ್ನು ದೇಶ ಕೊಟ್ಟಿದೆ. ತಾನೇ ಭಗವಂತ ಎಂದು ಸ್ವತಃ ಪ್ರಧಾನಿಯವರೇ ಹೇಳಿದ್ದರು. ಈಗ ಸಾಮಾನ್ಯ ಮನುಷ್ಯರಾಗಿದ್ದಾರೆ. ಎಲ್ಲರಿಗೂ ತಗ್ಗಿ-ಬಗ್ಗಿ ಹೋಗುವ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಇದನ್ನೂ ಓದಿ: ಬಿಜೆಪಿ ಮಾದರಿಯಲ್ಲಿ ಪಕ್ಷ ಸಂಘಟಿಸಿ ಬಲಿಷ್ಠಗೊಳಿಸುವೆ: ದ.ಕ ಪರಾಜಿತ ಕೈ ಅಭ್ಯರ್ಥಿ ಪದ್ಮರಾಜ್ - Padmaraj R Poojary