ಬೆಂಗಳೂರು : ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಬೋರ್ಡ್ಗಳಲ್ಲಿ ಓದಿದ್ದು, ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಪ್ಪಾಗಿ ನೀಡಿದ್ದಲ್ಲಿ ಅದರಿಂದ ತೊಂದರೆಯೇನೂ ಆಗುವುದಿಲ್ಲ. ಈ ಬಗ್ಗೆ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, ಪ್ರಾಧಿಕಾರವು ಅಭ್ಯರ್ಥಿಗಳ 12ನೇ ತರಗತಿ ಅಥವಾ ದ್ವಿತೀಯ ಪಿಯುಸಿ ನೋಂದಣಿ ಸಂಖ್ಯೆಯ (ರಿಜಿಸ್ಟರ್ಡ್ ನಂಬರ್) ಆಧಾರದ ಮೇಲೆ ಅಂಕಗಳ ವಿವರಗಳನ್ನು ಪಡೆದುಕೊಳ್ಳುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಿದ ಶಿಕ್ಷಣ ಮಂಡಳಿ (ಬೋರ್ಡ್) ಬಗ್ಗೆ ಅರ್ಜಿಯಲ್ಲಿ ಅಕಸ್ಮಾತಾಗಿ ತಪ್ಪು ಮಾಡಿದ್ದರೂ ಅಭ್ಯಂತರವಿಲ್ಲ ಎಂದು ಅವರು ಹೇಳಿದ್ದಾರೆ.
ಶಾಲೆಗಳು ಅಭ್ಯರ್ಥಿಗಳಿಗೆ ಸ್ಯಾಟ್ಸ್ ನಂಬರ್ ಕೊಡದೇ ಇದ್ದರೂ ತೊಂದರೆ ಏನಿಲ್ಲ. ಹಾಗೆಯೇ, ಸ್ಯಾಟ್ಸ್ ಡೇಟಾದಲ್ಲಿ ವಿದ್ಯಾರ್ಥಿಗಳ ವ್ಯಾಸಂಗದ ವಿವರಕ್ಕೆ ಸಂಬಂಧಿಸಿದಂತೆ ಒಂದೇ ಬೋರ್ಡಿನ ಹೆಸರಿದ್ದರೂ ಆತಂಕಕ್ಕೆ ಒಳಬೇಕಾಗಿಲ್ಲ. ಜೊತೆಗೆ, 2016-17ನೇ ಶೈಕ್ಷಣಿಕ ಸಾಲಿಗಿಂತ ಮೊದಲು ಸಿಬಿಎಸ್ಇ/ಸಿಐಎಸ್ಸಿಇ/ರಾಜ್ಯ ಶಿಕ್ಷಣ ಮಂಡಳಿಗಳಲ್ಲಿ 10ನೇ ತರಗತಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಸ್ಯಾಟ್ಸ್ ನಂಬರ್ ಬಗ್ಗೆ ಚಿಂತಿಸದೆ, ಸಿಇಟಿ ಅರ್ಜಿ ತುಂಬಬಹುದು ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ಸಿಇಟಿ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ: ಹೊಸ ವೇಳಾಪಟ್ಟಿ ಬಿಡುಗಡೆ ಮಾಡಿದ ಕೆಇಎ