ಶಿರಸಿ: ರಾಜ್ಯಸಭಾ ಚುನಾವಣೆಯ ಮತದಾನಕ್ಕೆ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದಾರೆ. ''ಮಂಗಳವಾರ ಮುಂಜಾನೆಯಿಂದ ತಮ್ಮ ಆರೋಗ್ಯದಲ್ಲಿ ಏರುಪೇರು ಆಗಿತ್ತು. ವೈದ್ಯರ ಸಲಹೆಯ ಮೇರೆಗೆ ನಾನು ಮತದಾನಕ್ಕೆ ಹೋಗಲು ಸಾಧ್ಯವಾಗಲಿಲ್ಲ'' ಎಂದು ಸ್ಪಷ್ಟಪಡಿಸಿದರು.
ಈ ಕುರಿತು ಯಲ್ಲಾಪುರದಲ್ಲಿ ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ಹೆಬ್ಬಾರ್, ''ಆಸ್ಪತ್ರೆಯಲ್ಲೇ ಸಮಯ ಕಳೆದು ಹೋಯಿತು. ಅದಕ್ಕೆ ರಾಜ್ಯಸಭಾ ಚುನಾವಣೆಯ ಮತದಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಯಾರಿಗೋ ಹೆದರಿ, ಬೆದರಿ ಮತದಾನದಿಂದ ದೂರ ಉಳಿದಿಲ್ಲ. ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಎಲ್ಲವನ್ನು ಎದುರಿಸಲು ಸಿದ್ಧ. ಕಾನೂನು ಹೋರಾಟ ಆಗಿರಲಿ ಅಥವಾ ರಾಜಕೀಯ ವಿಷಯ ಆಗಲಿ'' ಎಂದು ಖಡಕ್ ಆಗಿ ಹೇಳಿದರು.
ಪಕ್ಷದ ಮೇಲೆ ಅಸಮಾಧಾನ ಇದೆ- ಹೆಬ್ಬಾರ್: ''ತನಗೆ ಬಿಜೆಪಿ ಮೇಲೆ ಅಸಮಾಧಾನ ಇದೆ. ತನ್ನನ್ನು ಸ್ಥಳೀಯ ಬಿಜೆಪಿ ನಾಯಕರು ಸೋಲಿಸಲು ಪ್ರಯತ್ನ ಪಟ್ಟರು. ಇದನ್ನು ಹೈಕಮಾಂಡ್ ಗಮನಕ್ಕೂ ತಂದಿದ್ದೇನೆ. ಆದ್ರೆ, ಯಾವುದೇ ಕ್ರಮ ಆಗಿಲ್ಲ'' ಎಂದ ಹೆಬ್ಬಾರ್ ಅವರು, ''ಸದ್ಯ ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಟ್ಟು ಹೋಗಲ್ಲ. ಬಿಜೆಪಿಗೆ ರಾಜೀನಾಮೆ ಕೊಡುವ ಪ್ರಮೇಯ ಬಂದಿಲ್ಲ. ನನಗೆ ಪಕ್ಷದ ಮೇಲೆ ಅಸಮಾಧಾನ ಇದೆ. ನನ್ನನ್ನು ಸೋಲಿಸಲು ಮುಂದಾದವರನ್ನೇ ಪೋಷಿಸಲಾಗುತ್ತಿದೆ'' ಎಂದು ಆರೋಪಿಸಿದರು. ಆದ್ರೆ, ಕಾಂಗ್ರೆಸ್ ಸೇರ್ಪಡೆ ವಿಚಾರವನ್ನು ಶಿವರಾಮ್ ಹೆಬ್ಬಾರ್ ತಳ್ಳಿಹಾಕಿದರು.
''ನಾನು ಬಿಜೆಪಿಯ ಶಾಸಕನಾಗಿದ್ದು, ಇಲ್ಲಿ ಶಾಸಕನಾಗಿ ಉಳಿಯುತ್ತೇನೆ. ಆದರೆ, ಕಾದು ನೋಡೋಣ. ಮುಂದೆ ಬದಲಾದ ರಾಜಕಾರಣ ಏನು ಮಾಡಬೇಕು ಎಂಬುದರ ಬಗ್ಗೆ ಚಿಂತಿಸುತ್ತೇನೆ ಎಂದೂ ಸಹ ಪ್ರತಿಕ್ರಿಯಿಸಿದರು. ಇದೇ ವೇಳೆ ಪಾಕಿಸ್ತಾನ ಕುರಿತ ಘೋಷಣೆಗೆ ಸಂಬಂಧಿಸಿದ ಪ್ರತಿಕ್ರಿಯಿಸಿ, ''ಇದನ್ನು ಯಾರೇ ಹೇಳಿದ್ದರೂ ಖಂಡನೀಯ'' ಎಂದರು.
ಇದನ್ನೂ ಓದಿ: ಪಾಕ್ ಪರ ಘೋಷಣೆ ಆರೋಪ: ಸಮಗ್ರ ತನಿಖೆಯ ಅಗತ್ಯವಿದೆ ಎಂದ ಪರಮೇಶ್ವರ್