ಧಾರವಾಡ: ಮಳೆಯಿಂದಾಗಿ ಸೋರುತ್ತಿರುವ ಧಾರವಾಡ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತರಗತಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.
ಡಿಸಿ ದಿವ್ಯ ಪ್ರಭು ಅವರು ಸ್ವತಃ ಮುಂದೆ ನಿಂತು ತರಗತಿಗಳನ್ನು ಬೇರೆ ಕಟ್ಟಡಗಳಿಗೆ ಸ್ಥಳಾಂತರ ಕಾರ್ಯ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ "ನಿಮ್ಮಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿದೆ" ಎಂದು ಕೃತಜ್ಞತೆ ಸಲ್ಲಿಸಿದರು.
ಹಳೆಯ ಕಟ್ಟಡವಾಗಿದ್ದರಿಂದ ಮಹಿಳಾ ಕಾಲೇಜಿನ ಸ್ಥಿತಿ ಹೇಳತೀರದಾಗಿತ್ತು. ನಿರಂತರವಾಗಿ ಸುರಿಯುತ್ತಿದ್ದ ಮಳೆ, ನಿಂತ ನೀರಿನಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಪಾಠ ಮಾಡುವುದು ಸಮಸ್ಯೆ ಆಗಿತ್ತು. ಅಕ್ಷರಶಃ ಕಾಲೇಜು ಬೀಳುವ ಹಂತಕ್ಕೆ ತಲುಪಿದೆ. ವಿದ್ಯಾರ್ಥಿನಿಯರ ಕೂಗಿಗೆ ಸ್ಪಂದಿಸಿ, ಕಾಲೇಜಿನ ಪರಿಸ್ಥಿತಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಸರ್ಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿನಿಯರ ತರಗತಿಗಳನ್ನು ಧಾರವಾಡ ನಗರದ ಯುಪಿಎಸ್ ಹೈಸ್ಕೂಲ್ ಮತ್ತು ಡಯಟ್ ಆವರಣದಲ್ಲಿರುವ ಕೊಠಡಿಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದ್ದಾರೆ. ತಮ್ಮ ಸಮಸ್ಯೆಗೆ ಸ್ಪಂದಿಸಿ ತರಗತಿ ನಡೆಸಲು ಉತ್ತಮ ಕಟ್ಟಡವನ್ನು ನೀಡಿದ್ದಕ್ಕೆ ವಿದ್ಯಾರ್ಥಿನಿಯರು ಧನ್ಯವಾದ ಸಲ್ಲಿಸಿ, ಹರ್ಷ ವ್ಯಕ್ತಪಡಿಸಿದರು.