ಬೆಂಗಳೂರು: ಮುಖ್ಯಮಂತ್ರಿಗಳ ಕುಟುಂಬದ ಹೆಸರು ತಳುಕು ಹಾಕಿಕೊಂಡಿರುವ ಮೈಸೂರಿನ ಮುಡಾ ಹಗರಣ ಆರೋಪ ಪ್ರಕರಣ ಚರ್ಚೆಗೆ ಉಭಯ ಸದನಗಳಲ್ಲಿ ಅವಕಾಶ ನೀಡುವಂತೆ ಆಗ್ರಹಿಸಿ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಬಿಜೆಪಿ ಘೋಷಿಸಿದೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಕರ್ನಾಟಕದ ವಿಧಾನಸಭೆಯಲ್ಲಿ 136 ಶಾಸಕರಿರುವ ಪಕ್ಷವಾಗಿರುವ ಕಾಂಗ್ರೆಸ್ ಮುಡಾ ಹಗರಣದಲ್ಲಿ 3 ಸಾವಿರ ಕೋಟಿ ಅಕ್ರಮ ನಡೆದ ಆರೋಪ ಚರ್ಚೆಗೆ ಸಿದ್ದವಿಲ್ಲದೇ, ಹೇಳದೆ ಕೇಳದೆ ಓಡಿ ಹೋಗಿದೆ. ಫೈನಾನ್ಸ್ ಬಿಲ್ ಕೂಡ ತಂದಿದ್ದಾರೆ. ಅವರಿಗೆ ಧಮ್ಮು, ತಾಖತ್ತು ಇದ್ದರೆ 14 ಸೈಟ್ಗಳನ್ನು ನ್ಯಾಯಯುತವಾಗಿ ಪಡೆದಿದ್ದೇವೆ ಅಂತ ಹೇಳಬೇಕಿತ್ತು. ದಲಿತರ ಜಮೀನು ಲೂಟಿ ಹೊಡೆದಿದ್ದಾರೆ. 187 ಕೋಟಿ ದಲಿತರ ಹಣ ಲೂಟಿ ಹೊಡೆದಿದ್ದಾರೆ. ಮುಡಾದಲ್ಲಿ ದಲಿತರ ಜಮೀನು ಹೊಡೆದಿದ್ದಾರೆ ಎಂದು ಆರೋಪಿಸಿದರು.
ದಲಿತ ಸತ್ತಿದ್ದಾನೆ, ಅವರಿಗೆ ನಾಲ್ಕು ಮಕ್ಕಳ ಪೈಕಿ ಒಬ್ಬರ ಕೈಯಲ್ಲಿ ಮಾತ್ರ ಸಹಿ ಹಾಕಿಸಿಕೊಂಡಿದ್ದಾರೆ. ನಮ್ಮ ಜಮೀನು ಯಾಮಾರಿಸಿ ಬರೆಸಿಕೊಂಡಿದ್ದಾರೆ ಅಂತ ದೂರು ಕೊಟ್ಟಿರುವ ಕಾಪಿ ಇದೆ. ರಾಜ್ಯದ ಜನ ಈ ಭ್ರಷ್ಟಾಚಾರ ನೋಡ್ತಿದ್ದಾರೆ. ದಲಿತರ ಚಾಂಪಿಯನ್ ಈ ಸರ್ಕಾರ, ದಲಿತರ ಬಾಳಿಗೆ ಬೆಂಕಿ ಇಟ್ಟಿದ್ದಾರೆ. ನಿಯಮ 60ರಡಿ ನಿಲುವಳಿ ಸೂಚನೆ ಸಲ್ಲಿಸಿದ್ದು, ಚರ್ಚೆಗೆ ಅವಕಾಶ ಕೊಡಲಿಲ್ಲ. ಹಗರಣ ಆಗಿದೆ ಅಂತ ಒಪ್ಪಿ, ತನಿಖೆಗೆ ನೀಡಿದ್ದಾರೆ. ಮೊದಲು ಹಗರಣವೇ ಅಲ್ಲ ಎಂದು ಹೇಳಿದ್ರು.
ಸ್ಪೀಕರ್ ಭೋವಿ ಹಗರಣ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದೇಕೆ?: ಭೋವಿ ಹಗರಣ ಕೂಡ ಹಳೆಯದು, ಸ್ಪೀಕರ್ ಅದನ್ನ ಯಾಕೆ ಚರ್ಚೆಗೆ ಕೊಟ್ಟರು?. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ. ಕಾಂಗ್ರೆಸ್ ಸರ್ಕಾರ ಹೇಡಿಯ ರೀತಿ ಫಲಾಯನ ಮಾಡ್ತಿದೆ. ಅತಿರಥ ಮಹಾನಾಯಕರೆಲ್ಲಾ ಬಾಯಿ ಮುಚ್ಚಿ ಕುಳಿತಿದ್ದಾರೆ. ಸಿಎಂ ಬೆಂಬಲಕ್ಕೆ ಯಾರೂ ನಿಲ್ತಿಲ್ಲ. ಇದನ್ನ ಸದನದಲ್ಲಿ ಹೇಳಿದ್ರೆ ಮರ್ಯಾದೆ ಹೋಗುತ್ತೆ ಅಂತ ಸ್ಪೀಕರ್ ಶೆಲ್ಟರ್ ಸೇರಿದ್ದಾರೆ ಎಂದು ವ್ಯಂಗ್ಯವಾಡಿದರು. ಈ ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು, ಮಾತಾಡಲು ಅವಕಾಶ ಇದೆ. ಆದರೆ ಸ್ಪೀಕರ್ ಮತ್ತು ಈ ಸರ್ಕಾರ ಅವಕಾಶ ಕೊಡುತ್ತಿಲ್ಲ. ಇದರ ವಿರುದ್ಧ ಅಹೋರಾತ್ರಿ ಧರಣಿ ಮಾಡಲಿದ್ದೇವೆ. ರಾಜ್ಯದ ಜನರ ಪರವಾಗಿ ಹೋರಾಟ ಮಾಡುತ್ತೇವೆ ಎಂದರು.
ಹೈಕೋರ್ಟ್ ಛೀಮಾರಿ ಹಾಕಿದೆ- ವಿಜಯೇಂದ್ರ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಇಡಿ ವಿಚಾರದಲ್ಲಿ ಹೈಕೋರ್ಟ್ ಛೀಮಾರಿ ಹಾಕಿದೆ. ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗಿದೆ. ಸರ್ಕಾರಕ್ಕೆ ಚಾಟಿ ಬೀಸಿದೆ. ಮುಡಾ ವಿಚಾರ ಚರ್ಚೆ ಮಾಡಬೇಕು ಅಂದರೆ ಕಾನೂನು ಸಚಿವರು ಕಮೀಷನ್ ರಚನೆ ಮಾಡಿದ್ದೇವೆ, ಅಲ್ಲಿ ಹೇಳಿ ಅಂತಾರೆ. ಇವರಿಗೆ ನಾಚಿಕೆ ಆಗಬೇಕು. ಮುಡಾ ಹಗರಣದಲ್ಲಿ ಸಿಎಂ ಕುಟುಂಬ ಭಾಗಿಯಾಗಿದೆ. ಚರ್ಚೆಗೆ ಅವಕಾಶ ಕೇಳಿದ್ರೆ ಎನ್‌ಕ್ವೈರಿ ಕಮೀಷನ್ಗೆ ಹೋಗಿ ಅಂತಾರೆ. ಸಿಎಂ ಫಲಾಯಾನ ಮಾಡ್ತಿದ್ದಾರೆ ಎಂದರು.
ಸಭಾಧ್ಯಕ್ಷರಿಗೆ ವಿಜಯೇಂದ್ರ ಒತ್ತಾಯ ಮಾಡಿದಾಗ, ಸಿಎಂ ಧೈರ್ಯಸ್ಥರಿದ್ದಾರೆ. ಕಾನೂನು ಸಚಿವರು ಚರ್ಚೆ ಮಾಡ್ತಾರೆ ಅಂತಿದ್ರು. ಆದರೆ, ಸಿಎಂ ಫಲಾಯಾನ ಮಾಡುತ್ತಿದ್ದಾರೆ. ಸಿಎಂ ಸಭೆ ನಡೆಸಿದ್ದು, ಶಾಸಕರು ಬೆಂಬಲಕ್ಕೆ ಬರ್ತಿಲ್ಲ ಅಂತ ದೂರಿದ್ದರು. ಹಾಗಾಗಿ ಇಂದು ಶಾಸಕರು ಅವರ ಬೆನ್ನಿಗೆ ನಿಂತಿದ್ದಾರೆ. ಸ್ಪೀಕರ್ ಅವರನ್ನ ದುರುಪಯೋಗಪಡಿಸಿಕೊಂಡು ದಬ್ಬಾಳಿಕೆ ಮಾಡ್ತಿದ್ದಾರೆ. ಚರ್ಚೆಗೆ ಅವಕಾಶ ಕೊಡುತ್ತಿಲ್ಲ. ಇದನ್ನ ಖಂಡಿಸಿ ಅಹೋರಾತ್ರಿ ಧರಣಿ ಮಾಡಲಿದ್ದೇವೆ. ಸಿಎಂ ಕುಟುಂಬಕ್ಕೆ ನೀಡಿರೋ 14 ಸೈಟ್ ವಾಪಸ್ ಬರಬೇಕು. ಉಳಿದ ಸೈಟುಗಳೂ ಕೂಡ ಬರಬೇಕು. ಎನ್‌ಡಿಎ ಈ ಹೋರಾಟದಲ್ಲಿ ಭಾಗಿಯಾಗಲಿದೆ. ಬಿಜೆಪಿ-ಜೆಡಿಎಸ್ ಎರಡೂ ಹೋರಾಟ ನಡೆಸಲಿದೆ ಎಂದರು.